ರೋಣ:

ಬುದ್ದಿಮಾಂದ್ಯೆ (19) ಮೇಲೆ ಅತ್ಯಾಚಾರ ನಡೆದ ಹೇಯ ಘಟನೆಯೊಂದು ತಾಲೂಕಿನ ಅರಹುಣಸಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಅತ್ಯಾಚಾರಕ್ಕೆ ಒಳಗಾದ ಅಮಾಯಕ ಸಂತ್ರಸ್ತೆ ಇದೀಗ 6 ತಿಂಗಳ ಗರ್ಭಿಣಿ!

ಅದೇ ಊರಿನ ದುರಗಪ್ಪ ಭರಮಪ್ಪ ಮಾದರ (28) ಆರೋಪಿ. ಸಂತ್ರಸ್ತೆಯ ತಾಯಿ ನೀಡಿದ ದೂರಿನನ್ವಯ ರೋಣ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.

ಗದಗ ಜಿಮ್ಸ್ ಆಸ್ಪತ್ರೆ ಸಂತ್ರಸ್ತೆ 6 ತಿಂಗಳು ಗರ್ಭಿಣಿ ಎಂದು ಖಚಿತಪಡಿಸಿದ್ದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂತ್ರಸ್ತೆಯನ್ನು ಗದಗ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಿದ್ದಾರೆ.

ಚಾಕೊಲೇಟ್‌ ನೀಡಿ ರೇಪ್‌: ಸಂತ್ರಸ್ತೆ- ಆರೊಪಿ ಒಂದೇ ಊರಿನವರು. ಆರೋಪಿಗೆ ಮದುವೆಯಾಗಿಲ್ಲ. ಯುವತಿಯ ಮನೋವೈಕಲ್ಯ ದುರುಪಯೋಗ ಮಾಡಿಕೊಂಡು ಚಾಕೊಲೇಟ್‌ ನೀಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.


ನಿಧಾನಕ್ಕೆ ಸಂತ್ರಸ್ತೆಯ ದೇಹದಲ್ಲಿ ಬದಲಾವಣೆ ಆಗಿದ್ದನ್ನು ಗಮನಿಸಿದ ಗ್ರಾಮದ ಮಹಿಳೆಯರು, ಗರ್ಭ ಧರಿಸಿರುವುದನ್ನು ಮನಗಂಡಿದ್ದಾರೆ. ಸಂತ್ರಸ್ತೆ ಗರ್ಭಿಣಿ ಎನ್ನುವುದು ಖಚಿತವಾಗುತ್ತಿದ್ದಂತೆ, ಆ ಬಸುರಿಗೆ ಕಾರಣವಾದ ಆರೋಪಿ ಗ್ರಾಮದ ಪ್ರಭಾವಿಗಳ ಮೂಲಕ ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ ಒಡ್ಡಿ, ಗರ್ಭಪಾತ ಮಾಡಿಸಲು ಸಂತ್ರಸ್ತೆಯನ್ನು ಬಾಗಲಕೋಟೆಯ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾನೆ. ಆ ವೈದ್ಯರು ಗರ್ಭಪಾತ ಸಮ್ಮತಿಸಿಲ್ಲ. ದುಡುಕಿದರೆ ತಾಯಿ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿ ಕಳಿಸಿದ್ದಾರೆ. ಗರ್ಭಪಾತದ ಯತ್ನ ವಿಫಲವಾಗುತ್ತಿದ್ದಂತೆ ಆರೋಪಿ ಪ್ರಭಾವಿಗಳ ಮೂಲಕ ಸಂತ್ರಸ್ತೆ ತಾಯಿಗೆ ₹50 ಸಾವಿರ ಹಣ ಕೂಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾನೆ.

ಯುವಕರ ಜಾಗೃತಿ: ಈ ಅಮಾಯಕಿಯ ಮೇಲೆ ನಡೆದ ದೌರ್ಜನ್ಯ ಮತ್ತು ಊರಿನ ಪ್ರಭಾವಿಗಳು ಆರೋಪಿಗಳ ಪರ ನಿಂತಿರುವುದನ್ನು ಮನಗಂಡ ಗ್ರಾಮದ ಯುವಕರು ರೋಣ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಗಮನಕ್ಕೆ ಈ ವಿಷಯ ತಂದು ದುಷ್ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆ ಹಾಗೂ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಈ ಕರೆಗೆ ಸ್ಪಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಸಂತ್ರಸ್ತೆಗೆ ಸಾಂತ್ವನ ಹೇಳಿದರು. ಬಳಿಕ ಜುಲೈ-6 ರಂದು ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಸಂತ್ರಸ್ತೆ 22 ವಾರಗಳ ಗರ್ಭಿಣಿ ಎನ್ನುವುದು ಖಚಿತವಾಗಿದೆ. ವೈದ್ಯರು ಈ ಸಂತ್ರಸ್ತೆ ಗರ್ಭಿಣಿಯಾಗಿರುವ ಮಾಹಿತಿಯನ್ನು ಗದಗ ಜಿಲ್ಲಾ ಮಕ್ಕಳ‌ ಸಹಾಯವಾಣಿ ಜಿಲ್ಲಾ ಸಂಯೋಜಕಿಗೆ ನೀಡಿದ್ದಾರೆ.ವೈರಲ್‌ ಆದ ವಿಡಿಯೋ: ಐವರು ಕಾಮಾಂಧರು ಆಗಾಗ್ಗೆ ಈ ಬುದ್ದಿಮಾಂದ್ಯೆಗೆ ಚಾಕೊಲೇಟ್ ಕೊಡುವುದಾಗಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗುತ್ತಿರುವ ಸುದ್ದಿ ಗ್ರಾಮದಲ್ಲಿ ಆಗಾಗ ಕೇಳಿ ಬರುತ್ತಿತ್ತು. ಈ ಕಾಮಾಂಧರ ಹೆಸರುಗಳೂ ಅರಹುಣಸಿ ಗ್ರಾಮದಲ್ಲಿ ಜನಜನಿತ.ತಿಂಗಳ ಹಿಂದೆ ಓರ್ವ ಕಾಮಾಂಧ ಊರಿನ ಒಳ‌ರಸ್ತೆಯಲ್ಲಿ ಈ ಬುದ್ದಿಮಾಂದ್ಯೆಯನ್ನು ಕರೆದೊಯ್ಯುವ ದೃಶ್ಯವನ್ನು ಪಕ್ಕದ ಊರಿನ ಯುವಕನೋರ್ವ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬಾಲಕಿಯ ಊರಿನ ತನ್ನ ಗೆಳೆಯರ ಮೊಬೈಲ್‌ಗೆ ಹರಿಬಿಟ್ಟಿದ್ದ. ಇದು ಭಾರೀ ವೈರಲ್‌ ಆಗಿ ಈ ರೇಪ್‌ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಭಾವಿಗಳ ಮೂಲಕ ಆ ಯುವಕನನ್ನು ಕರೆಸಿ ಹಣ ನೀಡಿ ಆತನ ಮೊಬೈಲ್‌ನಲ್ಲಿನ ಇದ್ದ ದೃಶ್ಯವನ್ನು ಡಿಲಿಟ್‌ ಮಾಡಿಸಿದ್ದಾರೆ ಎನ್ನಲಾಗಿದೆ. ಸುಮಾರು ದಿನಗಳಿಂದ ಈ ಗ್ಯಾಂಗ್‌ ರೇಪ್‌ ಅರಹುಣಸಿ ಮತ್ತು ಪಕ್ಕದ ಊರುಗಳಲ್ಲಿ ಬಹು ಚರ್ಚಿತ ವಿಷಯವಾಗಿದೆ. ಬೀಟ್‌ ಪೊಲೀಸರಿಗೆ ವಿಷಯ ಗೊತ್ತಿದ್ದೂ ದೂರು ನೀಡುವವರು ಇಲ್ಲದೇ ಪ್ರಕರಣ ದಾಖಲಾಗಿರಲಿಲ್ಲ.

ಸಂತ್ರಸ್ತೆಯ ಕುಟುಂಬದ ಬಾಯಿ ಮುಚ್ಚಿಸಿ, ಪ್ರಕರಣ ಮುಚ್ಚಿಹಾಕಲು ಕಳೆದ ಒಂದೂವರೆ ತಿಂಗಳಿನಿಂದ ನಡೆದ ಪ್ರಭಾವಿಗಳ ಪ್ರಯತ್ನವೆಲ್ಲ ವಿಫಲವಾಗಿದ್ದರಿಂದ ರೋಣ ಪೊಲೀಸರು ಕೊನೆಗೂ ಮಂಗಳವಾರ ರಾತ್ರಿ ಸಂತ್ರಸ್ತೆಯ ತಾಯಿಯನ್ನು ಠಾಣೆಗೆ ಕರೆದು ತಂದು ದೂರು ಪಡೆದು, ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ದೂರಿನಲ್ಲಿ ದುರಗಪ್ಪ ಮಾದರ ಹೆಸರು ಮಾತ್ರ ಸೇರಿಸಿ, ಉಳಿದ ನಾಲ್ವರನ್ನು ಕೈಬಿಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ವರದಿ ನಂತರ ತೀರ್ಮಾನ: ಈ ಪ್ರಕರಣ ಗದಗ ಸಿಡಬ್ಲ್ಯುಸಿ (ಮಕ್ಕಳ ರಕ್ಷಣಾ ಸಮಿತಿ) ಮುಂದೆ ಇದೆ. ಸಂತ್ರಸ್ತೆ ಗರ್ಭಿಣಿ ಎನ್ನುವುದು ಖಚಿತವಾಗಿದೆ. ವಯಸ್ಸಿನ ದೃಢೀಕರಣಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೋಣ ಸಿಡಿಪಿಒ ಲಲಿತಾ ಅಳವಂಡಿ ತಿಳಿಸಿದರು.ವೈದ್ಯರ ವರದಿ: ಜು. 3ರಂದು ಜಿಮ್ಸನಲ್ಲಿ ವೈದ್ಯಕೀಯ ಪರಿಕ್ಷೆಗೆ ಒಳಪಡಿಸಲಾಗಿದ್ದು, ಗರ್ಭಿಣಿಯಾಗಿರುವ ಕುರಿತು ವೈದ್ಯರು ವರದಿ ನೀಡಿದ್ದು, ಈ ಮಾಹಿತಿಯನ್ನು ನಮ್ಮ ಮೇಲಧಿಕಾರಿಗಳಾದ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷರಿಗೆ ಕಳುಹಿಸಲಾಗಿದೆ ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ವಿನಯಕುಮಾರ ಬಂಟಗೌಡ್ರ ತಿಳಿಸಿದರು.ಆರೋಪಿ ಬಂಧನ: ಪ್ರಕರಣದ ಬಗ್ಗೆ ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂತ್ರಸ್ತೆಯನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದೆ ಎಂದು ರೋಣ ಪಿಎಸ್ಐ ಪ್ರಕಾಶ ಬಣಕಾರ ತಿಳಿಸಿದರು.