ನೀರು-ಸರಬರಾಜು ವಿಭಾಗದ ಸಿಬ್ಬಂದಿಗೆ ರೇನ್-ಕೋಟ್ ವಿತರಣಾ ಸಮಾರಂಭ

ಕನ್ನಡಪ್ರಭ ವಾರ್ತೆ ಹಳಿಯಾಳ

ಕುಡಿಯುವ ನೀರು (ಜೀವ-ಜಲ) ಪೂರೈಸುವುದು ಪುಣ್ಯದ ಕಾರ್ಯ. ಈ ಕಾಯಕದಲ್ಲಿ ತೊಡಗಿರುವ ಪುರಸಭೆಯ ನೀರು ಪೂರೈಕೆ ವಿಭಾಗದ ನೀವು ಅದೃಷ್ಟವಂತರು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪುರಸಭೆಯ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಪುರಸಭೆಯ ನೀರು ಪೂರೈಕಾ ವಿಭಾಗದ 41 ಸಿಬ್ಬಂದಿಗೆ ರೇನ್ ಕೋಟ್ ವಿತರಿಸಿ ಮಾತನಾಡಿದರು.

ನೀರಿನ ಸಮಸ್ಯೆಗೆ ಪೂರ್ಣ ವಿರಾಮ:


ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳಾದ ನಗರ ನೈರ್ಮಲ್ಯ, ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವುದು ಪೌರಸೇವಾ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಇವುಗಳಲ್ಲಿ ಕುಡಿಯುವ ನೀರು ಪೂರೈಕೆಯು ಪ್ರಮುಖವಾಗಿದೆ. ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ದೇವರ ದಯೆಯಿಂದ ಹಳಿಯಾಳ ಪಟ್ಟಣಕ್ಕೆ ನೀರಿನ ಸಮಸ್ಯೆ ಅಷ್ಟೊಂದು ಇಲ್ಲ. ಪಟ್ಟಣದ ಕೆಲವೆಡೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ಮೇಲಿಂದ ಮೇಲೆ ಸಮಸ್ಯೆ ಎದುರಾಗುತ್ತಿದೆ ಎಂಬುವುದು ನನಗೆ ಗೊತ್ತಿದೆ. ಈ ಸಮಸ್ಯೆಗೂ ಪೂರ್ಣ ವಿರಾಮವಿಡಲು ಪ್ರಯತ್ನಿಸಲಾಗುತ್ತಿದೆ. ಕುಡಿಯುವ ನೀರು ಯೋಜನೆಯಲ್ಲಿ ಹಳಿಯಾಳ ಪಟ್ಟಣಕ್ಕೆ ಮಂಜೂರಾದ ಅಮೃತ 2 ಯೋಜನೆಯು ಮುಕ್ತಾಯದ ಹಂತಕ್ಕೆ ತಲುಪಿದೆ ಎಂದರು.ಪಟ್ಟಣ ಕಳೆದ ಐದಾರು ವರ್ಷಗಳಲ್ಲಿ ನಿರೀಕ್ಷೆಗಿಂತಲೂ ಮಿಗಿಲಾಗಿ ಬೆಳೆದಿದೆ. ಹೊಸ ಬಡಾವಣೆಗಳು ತಲೆಯೆತ್ತಿವೆ. ಎಲ್ಲಿ ನೋಡಿದಲ್ಲಿ ಮನೆ ನಿರ್ಮಾಣದ ಕಾಮಗಾರಿಗಳು ಆರಂಭಗೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಸಾರ್ವಜನಿಕರೂ ಪಟ್ಟಣದ ಸ್ವಚ್ಛತೆ ಕಾಪಾಡಲು ಪುರಸಭೆಯ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪುರಸಭೆಯ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪುರಸಭೆಯ ವ್ಯವಸ್ಥಾಪಕ ಈರಣ್ಣ ಕೊಡ್ಲಿ, ನೀರು ಪೂರೈಕೆ ವಿಭಾಗದ ಮುಖ್ಯಸ್ಥ ಪ್ರಕಾಶ ಠೊಸುರ, ಮಾಜಿ ಅಧ್ಯಕ್ಷರಾದ ಉಮೇಶ ಬೊಳಶೆಟ್ಟಿ, ಮಾಲಾ ಬೃಗಾಂಜಾ, ದ್ರೌಪದಿ ಅಗಸರ, ಮಾಜಿ ಉಪಾಧ್ಯಕ್ಷರಾದ ಸತ್ಯಜಿತ ಗಿರಿ, ಸುವರ್ಣ ಮಾದರ, ಲಕ್ಷ್ಮೀ ವಡ್ಡರ, ಮಾಜಿ ಸದಸ್ಯ ಪ್ರಭಾಕರ ಗಜಾಕೋಶ, ಯಲ್ಲಪ್ಪ ಕೇಸರೇಕರ ಇದ್ದರು.