ಮೇಕೆದಾಟು: ಕಾಂಗ್ರೆಸ್ಸಿನ ದ್ವಂದ್ವ ನಿಲುವು- ಬೊಮ್ಮಾಯಿ

| Published : Mar 23 2024, 01:13 AM IST

ಸಾರಾಂಶ

ಮೇಕೆದಾಟು ಯೋಜನೆಗೆ ಡಿಎಂಕೆ ವಿರೋಧಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದ್ದು, ಕಾಂಗ್ರೆಸ್ 2019 ರಿಂದಲೂ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಒಂದೆಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಅದನ್ನು ವಿರೋಧಿಸುವ ಡಿಎಂಕೆ ಜತೆಗೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಮೇಕೆದಾಟು ಜಾರಿ ಬಗ್ಗೆ ನಿಜವಾದ ಬದ್ಧತೆ ಇದ್ದರೆ ಡಿಎಂಕೆಯೊಂದಿಗೆ ಮಾಡಿಕೊಂಡಿರುವ ಮೈತ್ರಿಯಿಂದ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಡಿಎಂಕೆ ವಿರೋಧಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದ್ದು, ಕಾಂಗ್ರೆಸ್ 2019 ರಿಂದಲೂ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ ಎಂದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅಸಮಾಧಾನ ಶಮನಗೊಳಿಸಲಾಗುವುದು, ಅವರಿಗೂ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಬಯಕೆ ಇದೆ. ಹೀಗಾಗಿ, ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡಿ, ಸಮಾಧಾನ ಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರೊಬ್ಬ ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೋವಾಗುವುದು ಸಹಜ. ಈಶ್ವರಪ್ಪ, ಕರಡಿ ಸಂಗಣ್ಣ, ಡಿ.ವಿ. ಸದಾನಂದಗೌಡ ಸೇರಿದಂತೆ ಮತ್ತಿತರೊಂದಿಗೆ ಪಕ್ಷದ ವರಿಷ್ಠರು ಮಾತುಕತೆ ಮಾಡಿ ಸಮಾಧಾನಪಡಿಸಲಿದ್ದಾರೆ ಎಂದರು.

ಮೇಕೆದಾಟು: ಕಾಂಗ್ರೆಸ್‌ ನಿಲುವೇನು?- ಜೋಶಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಕಾಂಗ್ರೆಸ್‌ ನಿಲುವೇನು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರಶ್ನಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಕಾಂಗ್ರೆಸ್‌ ನಮ್ಮ ನೀರು, ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿತಲ್ಲದೇ ದೆಹಲಿಯಲ್ಲೂ ಪ್ರತಿಭಟನೆ ನಡೆಸಿತು. ಈಗ ಅವರದೇ ಮೈತ್ರಿ ಪಕ್ಷ ಡಿಎಂಕೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಅದಕ್ಕಾಗಿ ಕಾಂಗ್ರೆಸ್‌ ರಾಜ್ಯದ ಜನರಿಗೆ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.ನಾವು ಸೀಜ್‌ ಮಾಡಿಲ್ಲ:ಕಾಂಗ್ರೆಸ್‌ ಬ್ಯಾಂಕ್‌ ಖಾತೆಯನ್ನು ಕೇಂದ್ರ ಸರ್ಕಾರ ಸೀಜ್‌ ಮಾಡಿಲ್ಲ. ಅವರು ತೆರಿಗೆ ಪಾವತಿ ಮಾಡದೇ ಇರುವುದರಿಂದ ಅಕೌಂಟ್‌ ಸೀಜ್‌ ಆಗಿದೆ. ನಮ್ಮನ್ನು ವೀಕ್‌ ಮಾಡಲು ಬಿಜೆಪಿ ಮಾಡುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ನಾವೇಕೆ ಕಾಂಗ್ರೆಸ್‌ ವೀಕ್‌ ಮಾಡೋಣ? ಜನರೇ ಕಾಂಗ್ರೆಸ್‌ನ್ನು ವೀಕ್‌ ಮಾಡಿದ್ದಾರೆ ಎಂದು ಛೇಡಿಸಿದರು.ಇ.ಡಿ. ಇಲಾಖೆ ದೆಹಲಿ ಮುಖ್ಯಮಂತ್ರಿಗೆ ವಿಚಾರಣೆಗೆ ಹಾಜರಾಗುವಂತೆ 9 ಬಾರಿ ನೋಟಿಸ್‌ ನೀಡಿತ್ತು. ಅವರು ವಿಚಾರಣೆಗೆ ಹಾಜರಾಗದೇ ಅಸಹಕಾರ ಮಾಡಿದ್ದರಿಂದ ಇ.ಡಿ.ಯೇ ಅವರನ್ನು ಬಂಧಿಸಿದೆಯೇ ಹೊರತು ಇದರಲ್ಲಿ ಕೇಂದ್ರದ ಪಾತ್ರವೇನು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೇಜ್ರಿವಾಲ್‌ ಬಹಳ ದುರಹಂಕಾರಿ, ತನಿಖೆಗೆ ಸಹಕಾರ ನೀಡದೆ ಮೊಂಡುತನ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಟದ ಮೂಲಕ ಅಧಿಕಾರಕ್ಕೆ ಬಂದ ಆಪ್‌, ಇದೀಗ ಆ ಪಕ್ಷವೇ ಭ್ರಷ್ಟಾಚಾರದಲ್ಲಿ ಸಿಲುಕಿದೆ ಎಂದು ಹೇಳಿದರು.ಧಾರವಾಡ ಲೋಕಸಭೆಗೆ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಸ್ಪರ್ಧೆಗೆ ಬಂದ ಮೇಲೆ ನೋಡೋಣ ಎಂದು ಹೇಳಿದರು.