ತರೀಕೆರೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆ
ಕನ್ನಡ ಪ್ರಭ ವಾರ್ತೆ, ತರೀಕೆರೆಪಟ್ಟಣದಲ್ಲಿ ಮಳೆಯಾಗದೆ ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಬರಗಾಲ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ಸರಬರಾಜಿಗೆ ಪುರಸಭೆ ಕೈಗೊಂಡ ಕ್ರಮವೇನು? ಶುದ್ಧ ಕುಡಿವ ನೀರು ಸರಬರಾಜಾಗುತ್ತಿದೆಯೇ, ಪಟ್ಟಣದ ಕಿರು ನೀರು ಸರಬರಾಜು ಘಟಕಗಳ ಶುದ್ಧತೆ ಬಗ್ಗೆ ಪುರಸಭೆ ಪರಿಶೀಲಿಸಿದೆಯೇ ಎಂದು ಸದಸ್ಯ ಟಿ.ಎಂ.ಭೋಜರಾಜ್ ಪ್ರಶ್ನಿಸಿದರು.
ಪುರಸಭಾ ಕಾರ್ಯಾಲಯದಿಂದ ಸೋಮವಾರ ಪುರಸಭೆ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪುರಸಭೆ ಮಾಜಿ ಸದಸ್ಯ ಪಾಂಡುರಂಗಪ್ಪ ಮತ್ತು ಸಾಮಾಜಿಕ ಹೋರಾಟ ಗಾರ ಡಾ.ಆರ್.ದೇವಾನಂದ್ ಅವರ ನಿಧನಕ್ಕೆಸಂತಾಪ ಸೂಚಿಸಲಾಯಿತು. ನಂತರ ಮಾತನಾಡಿ ನೀರಿನ ಲಭ್ಯತೆ ಇನ್ನಿತರ ವಿಷಯಗಳ ಬಗ್ಗೆ ಚಿರ್ಚಿಸಿದರು.ಪುರಸಭೆ ನಿರ್ಮಿಸಿರುವ ಶೌಚಾಲಯಗಳು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಬಂದ್ ಆಗಿವೆ. ಇದನ್ನು ಪುರಸಭೆ ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿದರು. ನಾಯಿಗಳ ಕಾಟ ವಿಪರೀತವಾಗಿದೆ. ಬೀದಿ ದೀಪಗಳಿಲ್ಲ ಏಕೆ ಹೀಗೆ ಎಂದು ಪ್ರಶ್ನಿಸಿದರು.ಸದಸ್ಯ ಟಿ.ದಾದಾಪೀರ್ ಮಾತನಾಡಿ ತಮ್ಮ ವಾರ್ಡಿಗೆ ಅಂಗನವಾಡಿ ಕೇಂದ್ರ ಮಂಜೂರಾಗಿತ್ತು. ಅಂಗನನಾಡಿ ಕೇಂದ್ರಕ್ಕೆ ಸಾಮಾನ್ಯ ಸಭೆಯಲ್ಲಿ ನಿವೇಶನ ಒದಗಿಸಲಾಗಿತ್ತು, ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸ್ಥಳ ಮಂಜೂರಾತಿ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪುರಸಭೆ ಕೆಲವು ಕಾಮಗಾರಿಗಳಿಗೆ ಟೆಂಡರ್ ಆಗಿದ್ದರೂ ಟೆಂಡರ್ ದಾರರು ಈ ಬಗ್ಗೆ ತಮೆಗೆ ಗೊತ್ತೇ ಇಲ್ಲ ಎನ್ನುತ್ತಾರೆ ಏಕೆ ಹೀಗೆ ಎಂದು ಆಕ್ಷೇಪಿಸಿದರು.
ಬಿ ಖಾತೆಯಲ್ಲಿ ₹2 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಪಟ್ಟಣದ ಎಲ್ಲ ವಾರ್ಡುಗಳಿಗೆ ಸೋಲಾರ್ ದೀಪ ಹಾಕಿಸಬೇಕು. ಮೂಲಭೂತ ಕಾಮಗಾರಿಗಳಿಗೆ ಟೆಂಡರ್ ಕರೆದಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು.
ಸದಸ್ಯೆ ಗೀತಾ ಗಿರಿರಾಜ್ ಮಾತನಾಡಿ ಕನಕ ಬಡಾವಣೆಯಲ್ಲಿ ಕೊಳಚೆ ನೀರು ಕುಡಿಯುವ ನೀರು ಶೇಖರಣೆ ಸಂಪಿಗೆ ಸೇರಿ ಹೋಗುತ್ತಿದೆ, ತಮ್ಮ ವಾರ್ಡಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯೆ ಅಶಾ ಅರುಣ್ ಕುಮಾರ್ ಮಾತನಾಡಿ ನಾಯಿಗಳ ಕಾಟ ವಿಪರೀತವಾಗಿದೆ. ಮಕ್ಕಳು ಅಂಗಡಿಗೆ ಹೋಗಲು ಹೆದರುತ್ತಿ ದ್ದಾರೆ, ಬೀದಿ ದೀಪಗಳನ್ನು ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಿಪಡಿಸಿದರು.ಸದಸ್ಯೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ ಅಜೆಂಡಾ ರೀತಿ ಸಭೆ ನಡೆಸಬೇಕು ಎಲ್ಲ ವಿಚಾರಗಳಲ್ಲಿ ಪರ ವಿರೋಧ ಗಳನ್ನು ಕೇಳಬೇಕು ಎಂದು ತಿಳಿಸಿದರು.
ಟಿ.ಎಂ.ಭೋಜರಾಜ್ ಮಾತನಾಡಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡದೆ ಎಲ್ಲಾ ವಾರ್ಡುಗಳಿಗೂ ಅನುದಾನ ಸಮನಾಗಿ ವಿತರಿಸಬೇಕು. ಬೀದಿ ದೀಪ ಸಮರ್ಪಕವಾಗಿ ನೀಡಲಾಗಿಲ್ಲ ಎಂದು ಹೇಳಿದರು.ಸದಸ್ಯ ಲೋಕೇಶ್ ಅವರು ಮಾತನಾಡಿ ಬಿ.ಎಚ್.ರಸ್ತೆ ಅಗಲೀಕರಣವಾಗಿ ಅಭಿವೃದ್ಧಿ ಆಗಿದೆ. ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆಗೆ ಪುರಸಭೆ ಅವಕಾಶ ಮಾಡಿಕೊಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.
ಸದಸ್ಯರು ತಮ್ಮ ಅಸನದಿಂದ ವೇದಿಕೆ ಬಳಿಯೇ ಬಂದು ತಮ್ಮ ವಾರ್ಡುಗಳ ವಿಚಾರ ಕುರಿತು ತೀವ್ರವಾಗಿ ಚರ್ಚಿಸಿದರು.ಸದಸ್ಯರಾದ ಪರಮೇಶ್, ರಂಗನಾಥ್, ಇತರೆ ಸದಸ್ಯರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ಶಮೀಮ್ ಬಾನು, ಪುರಸಭೆ ಸದಸ್ಯರು, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ತಾಹಿರಾ ತಸ್ನೀಮ್, ಪ್ರಸನ್ನಕುಮಾರ್ ಮತ್ತಿತರರು ಸಭಯಲ್ಲಿ ಭಾಗವಹಿಸಿದ್ದರು.-
29ಕೆಟಿಆರ್.ಕೆ.15ಃ ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯ ವತಿಯಿಂದ ಪುರಸಭೆ ಅಧ್ಯಕ್ಷ ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆಯನ್ನು ಏರ್ಪಡಿಸಲಾಗಿತ್ತು. ಪುರಸಭೆ ಉಪಾಧ್ಯಕ್ಷೆ ಶಮೀಮ್.ಬಾನು, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ತಾಹಿರಾ ತಸ್ನೀಮ್ ಇದ್ದಾರೆ.