ಪಾಲಿಕೆ ತೋಟಗಾರಿಕೆ ವಿಭಾಗ ನಿಷ್ಕ್ರಿಯ ಆರೋಪ

| Published : Jan 21 2024, 01:32 AM IST

ಸಾರಾಂಶ

ಪಾಲಿಕೆಯಲ್ಲಿ ತೋಟಗಾರಿಕೆ ವಿಭಾಗವಿದೆ. ಅದರ ಕೆಲಸ ಉದ್ಯಾನವನಗಳ ನಿರ್ವಹಣೆ. ಆದರೆ, ಈ ವಿಭಾಗವನ್ನು ಸಂಪೂರ್ಣ ನಿಷ್ಕ್ರಿಯ ಮಾಡಲಾಗಿದೆ. ಈ ವಿಭಾಗದವರಿಗೆ ಏನೂ ಕೆಲಸವಿಲ್ಲ. ತೋಟಗಾರಿಕೆ ವಿಭಾಗಕ್ಕೆ ನಿಯಮಾನುಸಾರ ಸಹಾಯಕ ತೋಟಗಾರಿಕೆ ನಿರ್ದೇಶಕರು ನೇಮಕವಾಗಿಲ್ಲ. ತೋಟಗಾರಿಕೆ ಬಗ್ಗೆ ಜ್ಞಾನವಿಲ್ಲದ ಸಿವಿಲ್ ಕಾಮಗಾರಿ ನಡೆಸುವಂತಹವರನ್ನು ನೇಮಿಸಿದ್ದಾರೆ

- -ಮೈಸೂರು ಗ್ರಾಹಕ ಪರಿಷತ್ ಸೇರಿದತೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಭಟನೆ----

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಪಾಲಿಕೆ ತೋಟಗಾರಿಕೆ ವಿಭಾಗ ನಿಷ್ಕ್ರಿಯವಾಗಿದ್ದು, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಮೈಸೂರು ಗ್ರಾಹಕ ಪರಿಷತ್, ಪರಿಸರ ಬಳಗ, ಕ್ಲೀನ್ ಮೈಸೂರು ಫೌಂಡೇಷನ್ ಸದಸ್ಯರು ಪಾಲಿಕೆ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.

ಪಾಲಿಕೆಯಲ್ಲಿ ತೋಟಗಾರಿಕೆ ವಿಭಾಗವಿದೆ. ಅದರ ಕೆಲಸ ಉದ್ಯಾನವನಗಳ ನಿರ್ವಹಣೆ. ಆದರೆ, ಈ ವಿಭಾಗವನ್ನು ಸಂಪೂರ್ಣ ನಿಷ್ಕ್ರಿಯ ಮಾಡಲಾಗಿದೆ. ಈ ವಿಭಾಗದವರಿಗೆ ಏನೂ ಕೆಲಸವಿಲ್ಲ. ತೋಟಗಾರಿಕೆ ವಿಭಾಗಕ್ಕೆ ನಿಯಮಾನುಸಾರ ಸಹಾಯಕ ತೋಟಗಾರಿಕೆ ನಿರ್ದೇಶಕರು ನೇಮಕವಾಗಿಲ್ಲ. ತೋಟಗಾರಿಕೆ ಬಗ್ಗೆ ಜ್ಞಾನವಿಲ್ಲದ ಸಿವಿಲ್ ಕಾಮಗಾರಿ ನಡೆಸುವಂತಹವರನ್ನು ನೇಮಿಸಿದ್ದಾರೆ ಎಂದು ಅವರು ದೂರಿದರು.

ನಿಯಮಾನುಸಾರ ತೋಟಗಾರಿಕೆ ಬಗ್ಗೆ ಅನುಭವವಿರುವಂತಹವರನ್ನು ನೇಮಿಸಬೇಕು. ಇವರ ಕೈಕೆಳಗೆ ಪಾಲಿಕೆಯ 9 ವಲಯ ಕಚೇರಿಗಳ ಉದ್ಯಾನವನಗಳು ಬರುತ್ತವೆ. ವಲಯ ಕಚೇರಿಗೆ ಒಬ್ಬ ತೋಟಗಾರಿಕೆ ಇನ್ಸ್ ಪೆಕ್ಟರ್ ಇರಬೇಕು. ಆದರೆ, ಕೇವಲ ಇಬ್ಬರು ಇನ್ಸ್ ಪೆಕ್ಟರ್ ಇದ್ದಾರೆ. 90 ಕೆಲಸಗಾರರ ಬದಲಿಗೆ 27 ಜನರಿದ್ದಾರೆ. ಇದರಲ್ಲೂ ಸಾಕಷ್ಟು ಜನ ನಿವೃತ್ತಿಯಾಗಿದ್ದಾರೆ. ತೋಟಗಾರಿಕೆ ವಿಭಾಗದ ಕೆಲಸವನ್ನು ಸಂಪೂರ್ಣವಾಗಿ ನಿಯಮಬಾಹಿರವಾಗಿ ವಲಯ ಕಚೇರಿಗೆ ವರ್ಗಾಯಿಸಲಾಗಿದೆ. ಇದಕ್ಕೆ ಕಾರಣ ಭ್ರಷ್ಟಾಚಾರ ಎಂದು ಅವರು ಆರೋಪಿಸಿದರು.

ಉದ್ಯಾನವನಗಳಲ್ಲಿ ನಿಯಮಬಾಹಿರವಾಗಿ ಕಟ್ಟಡ ಕಾಮಗಾರಿ ನಡೆಸಲು ಅನುಕೂಲವಾಗಲೆಂದು ವಲಯ ಕಚೇರಿಯಲ್ಲಿ ಇರುವವರೆಲ್ಲ ಸಿವಿಲ್ ಎಂಜಿನಿಯರ್ ಗಳು. ಅವರಿಗೆ ತೋಟಗಾರಿಕೆ ಬಗ್ಗೆ ಅನುಭವವಿಲ್ಲ. ಅಂತಹವರಿಗೆ ಉದ್ಯಾನವನದ ನಿರ್ವಹಣೆ ಕೆಲಸ ವಹಿಸಿದ್ದಾರೆ. ಕಾನೂನಿನನ್ವಯ ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ಉದ್ಯಾನವನದ ನಿರ್ವಹಣೆಯನ್ನು ಹಿಂದಿನಂತೆಯೇ ಪಾಲಿಕೆ ತೋಟಗಾರಿಕೆ ವಿಭಾಗವೇ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದರು.

ತೋಟಗಾರಿಕೆ ವಿಭಾಗ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಕೆಲಸ ಮಾಡಬೇಕು. ಅರಣ್ಯ ಇಲಾಖೆಯಲ್ಲಿ ಗಿಡಗಳ ನರ್ಸರಿ ವ್ಯವಸ್ಥೆ ಇದ್ದು, ನಿರ್ವಹಣೆಯನ್ನು ಪಾಲಿಕೆ ತೋಟಗಾರಿಕೆ ವಿಭಾಗ, ನುರಿತ ಸಿಬ್ಬಂದಿ ನೋಡಿಕೊಳ್ಳಬೇಕು. ಇದರಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪ ಇರಬಾರದು ಎಂದು ಅವರು ಒತ್ತಾಯಿಸಿದರು.

ಮೈಸೂರು ಗ್ರಾಹಕ ಪರಿಷತ್ ನ ಬಾಮಿ ಶೆಣೈ, ಲೀಲಾ ಶಿವಕುಮಾರ್, ಪರಶುರಾಮೇಗೌಡ, ಪರಿಸರ ಬಳಗದ ಕಿರಣ್, ಬಾನು ಮೋಹನ್, ಅರ್ಚನಾ ಮೊದಲಾದವರು ಇದ್ದರು.