ಏಡ್ಸ್ ತಡೆಗಟ್ಟುವ ಮಾರ್ಗಗಳ ಬಗ್ಗೆ ಶಿಕ್ಷಣ ಅವಶ್ಯಕ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಎಡ್ಸ್ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲೂಕು ವೈದ್ಯಾಧಿಕಾರಿ ಎಚ್.ಎಂ. ಪ್ರವೀಣ ಮಾತನಾಡಿ, ಏಡ್ಸ್ ತಡೆಗಟ್ಟುವ ಮಾರ್ಗಗಳ ಬಗ್ಗೆ ಶಿಕ್ಷಣ ಅವಶ್ಯಕ. ಏಡ್ಸ್ ಸೋಂಕಿತ, ಅವರ ಕುಟುಂಬಕ್ಕೆ ಗೌರವ ನೀಡುವುದರ ಜೊತೆಗೆ ಮಾನಸಿಕ ಸ್ಥೈರ್ಯ ನೀಡಬೇಕು. ಸೋಂಕಿತರನ್ನು ಕೀಳಾಗಿ ಕಾಣದೇ ಆರೋಗ್ಯದ ಅರಿವು ಮೂಡಿಸಬೇಕು. ಏಡ್ಸ್ ಸೋಂಕಿತರೊಂದಿಗೆ ಹಸ್ತಲಾಘವ, ಅಪ್ಪಿಕೊಳ್ಳುವುದರಿಂದ, ಆಹಾರ ಹಂಚಿಕೊಂಡು ಊಟ ಮಾಡುವುದರಿಂದ ಸಾಮಾನ್ಯ ಸಂಪರ್ಕದಿಂದ ಏಡ್ಸ್ ಹರಡುವುದಿಲ್ಲ ಎಂಬುದನ್ನು ತಿಳಿಯಬೇಕು. ತಡೆಗಟ್ಟುವ ಮಾರ್ಗಗಳಾದ ಸುರಕ್ಷಿತ ಲೈಂಗಿಕ ಜೀವನ, ಸೋಂಕಿತರಿಗೆ ಬಳಸಿದ ಚುಚ್ಚುಮದ್ದುಗಳ ಬಳಕೆ, ಪರಿಶೀಲಿಸಿದ ರಕ್ತ ಬಳಸುವುದು, ಜಾಗೃತಿ ಮತ್ತು ಪರೀಕ್ಷೆಯಿಂದ ಏಡ್ಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದರು.

ಪ್ಯಾನಲ್ ವಕೀಲ ಕೆ.ಪ್ರಹ್ಲಾದ್ ಮಾತನಾಡಿ, ಏಡ್ಸ್ ಸೋಂಕಿತರಿಗೆ ಹಲವಾರು ರೀತಿಯಲ್ಲಿ ಕಾನೂನಾತ್ಮಕವಾಗಿ ಸಹಕಾರವನ್ನು ನೀಡಲಾಗುವುದು. ಸೊಂಕಿತರ ಹಕ್ಕುಗಳನ್ನು ರಕ್ಷಿಸುವ ಕೆಲಸವಾಗಬೇಕಿದೆ. ಏಡ್ಸ್ ಮಾರಕ ಕಾಯಿಲೆ ಪ್ರತಿಯೊಬ್ಬರು ಜಾಗೃತಿ ವಹಿಸುವ ಅಗತ್ಯವಿದೆ ಎಂದರು.

ಮಕ್ಕಳ ತಜ್ಞ ಡಾ.ತಿಪ್ಪೇಸ್ವಾಮಿ ಮಾತನಾಡಿ, ಸೋಂಕಿತರಿಗೆ ಭಯದ ವಾತಾವರಣ ದೂರಗೊಳಿಸಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಏಡ್ಸ್ ಮುಂಜಾಗ್ರತಾ ಕ್ರಮಗಳ ಭಿತ್ತಿಪತ್ರ ಹಿಡಿದು, ಕಾಯಿಲೆ ವಿರುದ್ಧ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಹಿಡಿದು ಜಾಥಾ ನಡೆಸಿದರು. ಇದೇ ವೇಳೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮುಖ್ಯವೈದ್ಯಾಧಿಕಾರಿ ಶಿವಕುಮಾರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯಮುನಾ ಉಪ್ಪಾರ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಶಿವಲಿಂಗಪ್ಪ, ಆರ್‌ಬಿಎಸ್‌ಕೆ ತಂಡದ ಆಯುಷ್ಯ ವೈದ್ಯ ಡಾ.ಮಲ್ಲಿಕಾರ್ಜುನ, ಡಾ.ಚೇತನ, ಡಾ.ಅನಿತಾ, ಪಿಹೆಚ್‌ಸಿಒ ಪ್ರಮೋದಿನಿ, ಸಿಎಚ್‌ಒ ಕೃಷ್ಣ, ಲೋಹಿತ, ನೇಮ್ಯನಾಯ್ಕ್, ಎಚ್‌ಐಒ ರಾಜೇಶ, ಬಸವರಾಜ, ಬಾಷಾ, ನಾಗರಾಜ, ಸಂತೋಷ ಇದ್ದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ, ಕಾನೂನು ಅರಿವು-ನೆರವು ಕಾರ‍್ಯಕ್ರಮ ನಡೆಯಿತು.