ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಎಣ್ಣೆಕೊಪ್ಪ ಗ್ರಾಪಂ ವ್ಯಾಪ್ತಿಯ ತೆವರತೆಪ್ಪ ಗ್ರಾಮದ ರೈತ ದೇವರಾಜ್ ಅವರ ಹತ್ತಾರು ವರ್ಷಗಳಿಂದ ಬೆಳೆಸಿದ್ದ ಅಡಿಕೆ ತೋಟವನ್ನು ಅಧಿಕಾರಿಗಳು ತೆರವುಗೊಳಿಸಿರುವ ಕ್ರಮ ಖಂಡನೀಯ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ರೈತ ದೇವರಾಜ್ ಅವರ ಅಡಿಕೆ ತೋಟ ತೆರವುಗೊಳಿಸಿದ ಅಧಿಕಾರಿಗಳ ಕ್ರಮ ಖಂಡಿಸಿ ತಾಲೂಕು ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಭೂಮಿಯ ಕುರಿತಾದ ಸಂಪೂರ್ಣ ಮಾಹಿತಿ ರೈತರಿಗೆ ಇರುವುದಿಲ್ಲ. ತಲತಲಾಂತರಗಳಿಂದ ಪೂರ್ವಜರು ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನು ತಮ್ಮದೆಂದು ಭಾವಿಸಿ ರೈತರು ಕೃಷಿ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ, ನಿಯಮಾನುಸಾರ ನೋಟಿಸ್ ಜಾರಿಗೊಳಿಸಿದರೆ ರೈತರಿಗೆ ಕಾನೂನು ಹೋರಾಟ ನಡೆಸಲು ಅವಕಾಶವಿರುತ್ತದೆ. ಆದರೆ, ತೆವರತೆಪ್ಪ ಗ್ರಾಮದ ಪ್ರಕರಣದಲ್ಲಿ ಹತ್ತಾರು ವರ್ಷಗಳಿಂದ ಬೆಳೆದು ನಿಂತಿದ್ದ ಅಡಿಕೆ ತೋಟವನ್ನು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.ಸಚಿವ ಮಧು ಬಂಗಾರಪ್ಪ ಅವರಿಗೆ ರೈತರ ಬದುಕಿನ ಬಗ್ಗೆ ಕಾಳಜಿ ಇಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ಆಡಳಿತದಿಂದಾಗಿ ರೈತರು ಇಂತಹ ಸಂಕಷ್ಟ ಎದುರಿಸುವಂತಾಗಿದೆ. ರೈತಪರ ಕಾಳಜಿ ಇಲ್ಲದ ಜನಪ್ರತಿನಿಧಿಗಳಿಗೆ ಜನಸೇವೆ ಮಾಡುವ ನೈತಿಕ ಅರ್ಹತೆ ಇಲ್ಲ. ೨೦೨೮ರ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯ ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿದ ಹರತಾಳು ಹಾಲಪ್ಪ ಅವರು, ಅಡಿಕೆ ತೋಟ ತೆರವುಗೊಳಿಸಲು ನೀಡಿರುವ ಆದೇಶದ ಪ್ರತಿಯನ್ನು ತೋರಿಸುವಂತೆ ಪಟ್ಟು ಹಿಡಿದರು.
ರೈತನಿಗೆ ನೋಟಿಸ್ ನೀಡದೆ ತೋಟ ತೆರವುಗೊಳಿಸಿದ್ದು ಏಕೆ?, ಸರ್ವೆ ನಡೆಸಿದ ದಿನಾಂಕದ ದಾಖಲೆ ಎಲ್ಲಿದೆ? ಸರ್ವೆಯರ್ ಯಾವ ಅಧಿಕಾರದ ಮೇರೆಗೆ ತೆರವು ಕಾರ್ಯಕ್ಕೆ ಮುಂದಾದರು? ಪೊಲೀಸರಿಗೂ ತೆರವು ಕಾರ್ಯಾಚರಣೆಯ ಮುಂಚಿತ ಮಾಹಿತಿ ನೀಡಿಲ್ಲ. ಒಂದು ವೇಳೆ ಸ್ಥಳದಲ್ಲಿ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಹೊರುತ್ತಿದ್ದರು? ಲೋಕಾಯುಕ್ತದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ತೆರವು ಕಾರ್ಯಾಚರಣೆ ನಡೆಸಿದ್ದು ಹೇಗೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ವಿಚಾರವಾಗಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಸಿದರು. ಸರ್ಕಾರಿ ನೌಕರರೂ ಬಗರ್ಹುಕುಂ ಹಕ್ಕುಪತ್ರ ಪಡೆದಿರುವ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಿದರು.ಬಿಜೆಪಿ ಮುಖಂಡ ಡಾ. ಜ್ಞಾನೇಶ್ ಮಾತನಾಡಿ, ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ಬಾರದೆ ಅಡಿಕೆ ತೋಟವನ್ನು ಅಧಿಕಾರಿಗಳು ತೆರವುಗೊಳಿಸಲು ಹೇಗೆ ಸಾಧ್ಯವಾಯಿತು?, ಸಂವೇದನೆ ಕಳೆದುಕೊಂಡಿರುವ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ರೈತರಿಗೆ ತೊಂದರೆ ನೀಡುವ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಗಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ, ಗಜಾನನರಾವ್ ಉಳವಿ, ಟಿ.ಡಿ. ಮೇಘರಾಜ್, ಡಾ. ಜ್ಞಾನೇಶ್, ದೇವೇಂದ್ರಪ್ಪ ಚನ್ನಾಪುರ, ರುದ್ರಪ್ಪ ಕಡ್ಲೆರ್, ಮಲ್ಲಿಕಾರ್ಜುನ ದ್ವಾರಳ್ಳಿ, ರಾಜಶೇಖರ್ ಗಾಳಿಪುರ, ಕೆ. ಅಜ್ಜಪ್ಪ, ಶಿವಕುಮಾರ್ ಕಡಸೂರು, ಸುರೇಶ್ ಉದ್ರಿ, ಸಂಜಯ್, ಜಾನಕಪ್ಪ ಒಡೆಯರ್, ವಿನಯ್ ಶೆರ್ವಿ, ಗುರುಮೂರ್ತಿ ವೈ.ಜಿ, ಮೋಹನ್, ಉಮೇಶ್ ಉಡುಗಣಿ, ಪರಮೇಶ್ವರ ಮಣ್ಣತ್ತಿ, ಶ್ರೀಧರ್ ಶೇಟ್, ಮನಸ್ವಿನಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.