ಕಡಲೆಕಾಯಿ ಪರಿಷೆಗೆ ಸಚಿವ ಮುನಿಯಪ್ಪ ಚಾಲನೆ

| Published : Nov 26 2024, 12:47 AM IST

ಸಾರಾಂಶ

ಕೊನೆ ಕಾರ್ತಿಕ ಸೋಮವಾರ ಅಂಗವಾಗಿ ಪಾರಿವಾಳ ಗುಟ್ಟ ಶ್ರೀ ಆಂಜನೇಯ ಸ್ವಾಮಿ ಭಕ್ತ ಮಂಡಳಿಯವರು ಏರ್ಪಡಿಸಿದ್ದ 69ನೇ ವರ್ಷದ ಕಡಲೆಕಾಯಿ ಪರಿಷೆಗೆ ಸಚಿವ ಮುನಿಯಪ್ಪ ಚಾಲನೆ ನೀಡಿದರು.

ದೇವನಹಳ್ಳಿ: ಕಡ್ಲೆಕಾಯಿ ಪರಿಷೆಗೆ ತನ್ನದೇ ಆದ ಇತಿಹಾಸವಿದ್ದು, ರೈತರು ತಮ್ಮ ಜಮೀನುಗಳಲ್ಲಿ ಸಮೃದ್ಧಿ ಬೆಳೆ ಕಂಡು ಹರ್ಷಿತರಾಗಿ ಈ ಹಬ್ಬ ಆಚರಣೆ ರೂಢಿಯಲ್ಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಚ್‌. ಮುನಿಯಪ್ಪ ತಿಳಿಸಿದರು. ಕೊನೆ ಕಾರ್ತಿಕ ಸೋಮವಾರ ಅಂಗವಾಗಿ ಪಾರಿವಾಳ ಗುಟ್ಟ ಶ್ರೀ ಆಂಜನೇಯ ಸ್ವಾಮಿ ಭಕ್ತ ಮಂಡಳಿಯವರು ಏರ್ಪಡಿಸಿದ್ದ 69ನೇ ವರ್ಷದ ಕಡಲೆಕಾಯಿ ಪರಿಷೆಗೆ ಸಚಿವ ಮುನಿಯಪ್ಪ ಚಾಲನೆ ನೀಡಿದರು. ಕಡಲೆ ಕಾಯಿ ಪರಿಷೆ ಆಚರಣೆ ರೈತರ ಸಂತೋಷಕ್ಕೆ ಕಾರಣವಾಗಿದೆ. ಅಲ್ಲದೆ ಶ್ರೀ ಆಂಜನೇಯ ಸ್ವಾಮಿ ದರ್ಶನ ಸಂತೋಷ ಉಂಟುಮಾಡಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸಿ. ಜಗನ್ನಾಥ್‌ ಮಾತನಾಡಿ, ಈ ಪುರಾತನ ದೇವಾಲಯ ಸುತ್ತಮುತ್ತ ಇರುವ ಸರ್ವೇ ನಂ 2,3,4,9, ಹಾಗೂ ಕಸಬ ಸರ್ವೇ ನಂ 122 ರಲ್ಲಿ ಸುಮಾರು 14 ಎಕರೆ ಜಮೀನನ್ನು ದೇವಾಲಯದ ಪಹಣಿಯಲ್ಲಿ ಬರುವಂತೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಕಡಲೆಕಾಯಿ ಪರಿಷೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು. ಬಯಪ ಅಧ್ಯಕ್ಷ ಶಾಂತಕುಮಾರ್‌, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್‌. ರವಿಕುಮಾರ್‌, ಪುರಸಭಾ ಸದಸ್ಯ ಎನ್‌. ರಘು, ಮುಖಂಡರಾದ ಅ. ಚಿನ್ನಪ್ಪ, ನಾಗೇಗೌಡ ಉಪಸ್ಥಿತರಿದ್ದರು.