ಸಾರಾಂಶ
ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯಮ ವಿಸ್ತರಣೆ ಮಾಡಲು ಸಾಕಷ್ಟು ವಿಪುಲ ಅವಕಾಶಗಳಿವೆ.
ಬಳ್ಳಾರಿ: ಕರ್ನಾಟಕದಲ್ಲಿ ಹೂಡಿಕೆಗೆ ವಿಪುಲವಾದ ಅವಕಾಶಗಳಿದ್ದು, ಹೂಡಿಕೆ ಮಾಡಲು ಮುಂದೆ ಬರುವ ಕಂಪನಿಗಳಿಗೆ ಎಲ್ಲ ನೆರವನ್ನು ಕರ್ನಾಟಕ ಸರ್ಕಾರದಿಂದ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ನಡೆದ ಇಂಡೋ-ಯುರೋಪಿಯನ್ ಹೂಡಿಕೆ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಸಂತೋಷ್ ಲಾಡ್ ಅವರು ಮಾತನಾಡಿದರು.ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯಮ ವಿಸ್ತರಣೆ ಮಾಡಲು ಸಾಕಷ್ಟು ವಿಪುಲ ಅವಕಾಶಗಳಿವೆ. ಎಲ್ಲ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಹೂಡಿಕೆದಾರರಿಗೆ ನೆರವು ಒದಗಿಸಲಿದೆ. ಕೃಷಿ, ಉದ್ದಿಮೆ ಹೀಗೆ ಹಲವು ರಂಗದಲ್ಲಿ ಹೂಡಿಕೆ ಮಾಡಬಹುದು. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಕರ್ನಾಟಕದ ಜಿಡಿಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ನಮ್ಮ ಕರ್ನಾಟಕವು ಕೇವಲ ಐಟಿ ಮಾತ್ರವಲ್ಲದೆ ಜೈವಿಕ ತಂತ್ರಜ್ಞಾನ (ಬಿಟಿ) ದಲ್ಲೂ ದೊಡ್ಡ ಹೆಸರು ಪಡೆದಿದೆ. ಪಶುಸಂಗೋಪನೆ, ರೇಷ್ಮೆಯಂತಹ ಚಟುವಟಿಕೆಗಳ ವಿಸ್ತರಣೆಗೆ ಅತ್ಯುತ್ತಮ ಅವಕಾಶಗಳಿವೆ. ಏಷ್ಯಾದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ಕರ್ನಾಟಕದಲ್ಲಿದೆ. ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳು ಕರ್ನಾಟಕದಲ್ಲಿ ಶ್ರೇಷ್ಠ ಪ್ರಗತಿ ಸಾಧಿಸಿವೆ ಎಂದು ವಿವರಿಸಿದರು.ಬ್ರಿಟನ್ ಮತ್ತು ಭಾರತದ ನಂಟು ತುಂಬ ಹಳೆಯದು. ಹೂಡಿಕೆಗೆ ಎರಡೂ ಸರ್ಕಾರಗಳು ಕೈ ಜೋಡಿಸಿದರೆ ಬಹಳಷ್ಟು ಪ್ರಯೋಜನವಾಗಲಿವೆ. ಈ ನಿಟ್ಟಿನಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಿದ ಪಂಚಗ್ಯಾರಂಟಿಗಳ ಬಗ್ಗೆ ವಿವರಿಸಿದ ಸಚಿವ ಲಾಡ್, ಈ ಕಾರ್ಯಕ್ರಮಗಳನ್ನು ನಮ್ಮ ದೇಶದ ಇತರ ರಾಜ್ಯಗಳಲ್ಲದೇ, ವಿಶ್ವದ ಹಲವು ದೇಶಗಳಿಗೆ ಸಹ ಮಾದರಿಯಾಗಿ ಪರಿಗಣಿಸಿವೆ. ಇದೊಂದು ಅಭೂತಪೂರ್ವವಾದ ಕಾರ್ಯಕ್ರಮ. ಈ ಕಾರ್ಯಕ್ರಮಗಳಿಗೆ ಪ್ರತಿ ವರ್ಷ 12 ಬಿಲಿಯನ್ ಡಾಲರ್ ಖರ್ಚು ಮಾಡಲಾಗುತ್ತಿದೆ. ಬಡ ಜನರಿಗೆ ಸಾಮಾಜಿಕ ಸೇವಾ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಕರ್ನಾಟಕ ರಾಜ್ಯದ ಜಿಡಿಪಿ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹ ಯೋಜನೆಯನ್ನು ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಹೇಳಿದರು.