ಗುರು ಬೋಧಾಮೃತದಿಂದ ಸುಖ-ಶಾಂತಿ ಪ್ರಾಪ್ತಿ: ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು

| Published : Dec 02 2024, 01:18 AM IST

ಗುರು ಬೋಧಾಮೃತದಿಂದ ಸುಖ-ಶಾಂತಿ ಪ್ರಾಪ್ತಿ: ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಗುರುವಿನ ಬೋಧಾಮೃತದಿಂದ ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಕಲಘಟಗಿ: ಯೋಗಿಗೆ ಯೋಗ, ಯೋಧನಿಗೆ ಕಾದಾಡುವ, ತಂದೆಗೆ ಮಕ್ಕಳ, ರೈತರಿಗೆ ಬೆಳೆಯ ಚಿಂತೆ ಇರುವಂತೆ ಶ್ರೀ ಗುರುವಿಗೆ ಶಿಷ್ಯನ ಉದ್ಧಾರದ ಚಿಂತೆ ಇರುತ್ತದೆ. ಶ್ರೀ ಗುರುವಿನ ಬೋಧಾಮೃತದಿಂದ ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶುಕ್ರವಾರ ಪಟ್ಟಣದ ಶ್ರೀಮದ್‌ ರಂಭಾಪುರಿ ಶಾಖಾ ಹನ್ನೆರಡುಮಠದಲ್ಲಿ ಲಿಂ. ಶ್ರೀ ಮಡಿವಾಳ ಶಿವಾಚಾರ್ಯರ 34ನೇ ಪುಣ್ಯಸ್ಮರಣೋತ್ಸವ-ನೂತನ ಶ್ರೀಗಳ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು. ಬೆಳೆದುಕೊಂಡು ಬಂದ ಪರಂಪರೆ ಉತ್ಕೃಷ್ಟವಾದುದು. ಬದುಕಿ ಬಾಳುವ ಜನಸಮುದಾಯಕ್ಕೆ ಸಂಸ್ಕಾರ ಸದ್ವಿಚಾರಗಳ ಅವಶ್ಯಕತೆ ಬಹಳಷ್ಟಿದೆ. ಆಧುನಿಕತೆಗೆ ಮಾರುಹೋಗಿ ಆದರ್ಶ ಮೌಲ್ಯಗಳನ್ನು ಮನುಷ್ಯ ಮರೆಯುತ್ತಿದ್ದಾನೆ. ಹೊನ್ನು, ಹಣ ಆಸ್ತಿ ಯಾವುದೂ ಸ್ಥಿರವಲ್ಲ. ನಾವು ಮಾಡಿದ ಸತ್ಕಾರ್ಯಗಳು ಶಾಶ್ವತ. ಹಣ ಗಳಿಕೆಯತ್ತ ಮನುಷ್ಯನ ಗಮನ ಇದೆಯೇ ಹೊರತು ಗುಣ ಗಳಿಕೆಯತ್ತ ಇಲ್ಲ. ಮನೋವಿಲಾಸಕ್ಕೆ ಕೊಟ್ಟಷ್ಟು ಸಮಯ ಮನಸ್ಸಿನ ವಿಕಾಸಕ್ಕೆ ದಾರಿ ಹುಡುಕುತ್ತಿಲ್ಲ. ಹೀಗಾಗಿ, ಮಾನವ ಜೀವನ ಅತೃಪ್ತಿಯಿಂದ ಕೂಡಿದೆ.

ಜೀವನದಲ್ಲಿ ಗುರಿ ಮತ್ತು ಗುರುವನ್ನು ಆಶ್ರಯಿಸಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ. ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಆದರ್ಶ ಗುರು ಪರಂಪರೆಗೆ ಶ್ರಮಿಸಿದರು. ಧರ್ಮಮುಖಿಯಾಗಿ ಸಮಾಜಮುಖಿಯಾಗಿ ನಿರ್ವಹಿಸಿದ ಶ್ರೇಯಸ್ಸು ಅವರದಾಗಿತ್ತು. ಇಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನು ಗುರುತಿಸಿ ಇಂದು ಗುರು ಪಟ್ಟಾಧಿಕಾರ ನೆರವೇರಿಸಿದ್ದು, ಸಂತೋಷದ ಸಂಗತಿ. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮಡಿವಾಳ ಶಿವಾಚಾರ್ಯರು ಶ್ರೀ ಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಅಮೂಲ್ಯ ಮಾರ್ಗದರ್ಶನ ನೀಡಲು ಎಂದು ಆಶಿಸಿ ರೇಶ್ಮೆ ಮಡಿ ಸ್ಮರಣಿಕೆ ಫಲವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಪಂಚಮುದ್ರಾ ಸಮೇತ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಲಿಂ. ಮಡಿವಾಳ ಶಿವಾಚಾರ್ಯರ 34ನೇ ವರ್ಷದ ಪುಣ್ಯಾರಾಧನೆ ಹಾಗೂ ಇಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳ 71ನೇ ವರ್ಷದ ಜನ್ಮ ವರ್ಧಂತಿ ಆಚರಿಸಲಾಯಿತು. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಪರಂಪರೆ–ಗುರುಸ್ಥಾನದ ಹಿರಿಮೆ ಹಾಗೂ ಸಕಲ ಧರ್ಮ ಬಾಂಧವರ ಏಳಿಗೆಗಾಗಿ ಸದಾ ಶ್ರಮಿಸುತ್ತೇವೆ. ಶ್ರೀ ರೇವಣಸಿದ್ಧ ಶಿವಾಚಾರ್ಯರಿಗೆ ಕೊಟ್ಟ ಸಹಕಾರ ಸೇವಾ ಮನೋಭಾವ ನಮ್ಮ ಕಾಲದಲ್ಲಿ ಇರಬೇಕು ಎಂದು ಬಯಸಿದರು. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭಿವೃದ್ಧಿ, ಭಕ್ತರ ಕಲ್ಯಾಣ ಮಾಡುವುದಾಗಿ ಸಂಕಲ್ಪ ಕೈಗೊಂಡರು.

ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಧರ್ಮ ಸಮಾರಂಭವನ್ನು ಅ.ಭಾ. ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.

ಸಮಾರಂಭಧಲ್ಲಿ ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಮರುಳಸಿದ್ಧ ಶಿವಾಚಾರ್ಯರು, ಮುತ್ನಾಳ ಶಿವಾನಂದ ಶಿವಾಚಾರ್ಯರು, ಹನುಮಾಪುರ ಸೋಮಶೇಖರ ಶಿವಾಚಾರ್ಯರು, ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಮಂತ್ರೋಡಿಯ ಸಿದ್ಧರಾಮೇಶ್ವರ ಶಿವಾಚಾರ್ಯರು, ಕೂಡಲದ ಮಹೇಶ್ವರ ಶಿವಾಚಾರ್ಯರು ಮೊದಲ್ಗೊಂಡು ಸುಮಾರು 30ಕ್ಕೂ ಹೆಚ್ಚು ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು.

ಸಮಾರಂಭದ ನಂತರ ನೂತನ ಶ್ರೀಗಳ ಪಲ್ಲಕ್ಕಿ ಮಹೋತ್ಸವ ನಗರದಲ್ಲಿ ಸಂಭ್ರಮದಿಂದ ಜರುಗಿತು. ಅನ್ನ ದಾಸೋಹ ಜರುಗಿತು.