ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರನ್ನು (ನೇಕಾರರು) ಪ್ರೋತ್ಸಾಹಿಸಿ, ರೇಷ್ಮೆ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬಿಳಿಗಿರಿ ರಂಗನಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಿಳಿಗಿರಿ ರಂಗನಬೆಟ್ಟದ ರೇಷ್ಮೆ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ರೇಷ್ಮೆ ಕೃಷಿ ಕೇಂದ್ರ ಹಾಗೂ ಕೇಂದ್ರದ ಅವರಣ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬೆಟ್ಟದಲ್ಲಿ ರೇಷ್ಮೆ ಕೃಷಿ ಕೇಂದ್ರದ ಒಟ್ಟು 38 ಎಕರೆ ವಿಸ್ತೀರ್ಣದ ಜಾಗ ಒತ್ತುವರಿಯಾಗಿದೆ. ಕಾಡುಪ್ರಾಣಿಗಳ ಹಾವಳಿಯು ಇದೆ. ಕಾಡುಪ್ರಾಣಿಗಳ ಉಪಟಳ ತಡೆಯಲು ರೈಲ್ವೆ ಬ್ಯಾರಿಕೇಡ್ ಅವಶ್ಯವಿದೆ. ಆವರಣದಲ್ಲಿರುವ ರೇಷ್ಮೆ ಕಾರ್ಖಾನೆಗಳು ತುಂಬಾ ಹಳೇಯದಾಗಿ ಶಿಥಿಲಗೊಂಡಿವೆ. ಕೇಂದ್ರದ ನಿರ್ವಹಣೆಗಾಗಿ ಸಿಬ್ಬಂದಿ ಕೊರತೆ ಇದೆ. ಪ್ರಸ್ತುತ ಇಲ್ಲಿನ ರೇಷ್ಮೆ ಕೃಷಿ ಕೇಂದ್ರವನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಹಿಂದೆ ಚಾಮರಾಜನಗರ ರೇಷ್ಮೆ ಬೆಳೆಗೆ ಬಹಳ ಹೆಸರುವಾಸಿಯಾಗಿತ್ತು. ಕಾಲಕ್ರಮೇಣ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅಭಿವೃದ್ಧಿಯಿಂದ ರೇಷ್ಮೆ ಬೆಳೆ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆಯಾಗಿದೆ. ಚೀನಾ ಮತ್ತು ಜಪಾನ್ ದೇಶಗಳಲ್ಲಿಯೂ ರೇಷ್ಮೆ ಉತ್ಪಾದನೆ ಕುಸಿತ ಕಂಡಿದೆ ಎಂದರು.ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ರೇಷ್ಮೆ ಬೆಳೆ ಹೆಚ್ಚಾಗುತ್ತಿದೆ. ರೈತರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿಯೂ ರೇಷ್ಮೆ ನೇಕಾರರನ್ನು ಪ್ರೋತ್ಸಾಹಿಸಿ ಉತ್ಪಾದನೆ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಪ್ರಮುಖವಾಗಿ ರೀಲರ್ಸ್‌ಗನ್ನು ಪ್ರೋತ್ಸಾಹಿಸಬೇಕಿದೆ. ರೇಷ್ಮೆ ಬೆಳೆಗೆ ರೈತರನ್ನು ಉತ್ತೇಜಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಅಭಿವೃದ್ಧಿ ಬಗ್ಗೆ ವಿಸ್ತೃತವಾದ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಿ ಉತ್ಪಾದನೆ ಹೆಚ್ಚಿಸಲು 15 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರೇಷ್ಮೆ ಅಭಿವೃದ್ಧಿಗಾಗಿ ಅವಶ್ಯವಾಗಿರುವ ಕಾರ್ಯಕ್ರಮಗಳ ಸಮಗ್ರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಕ್ರಮವಹಿಸಲಾಗುವುದು ಎಂದರು.ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಶ್ರೀರೂಪ, ರಿಜಿಸ್ಟ್ರಾರ್ ಡಾ.ರಾಮೇಗೌಡ, ಕೊಳ್ಳೇಗಾಲ ತಹಸೀಲ್ದಾರ್ ಐ.ಈ.ಬಸವರಾಜು, ಇತರೆ ಅಧಿಕಾರಿಗಳು ಹಾಜರಿದ್ದರು.