ಸಾರಾಂಶ
ಉಡುಪಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಆಡಳಿತಾಧಿಕಾರಿಯಾಗಿರುವ ಉಡುಪಿ ಭೂ ಕಂದಾಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಆಡಳಿತಾಧಿಕಾರಿಯಾಗಿರುವ ಉಡುಪಿ ಭೂ ಕಂದಾಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ತಾ.ಪಂ.ಗೆ ಚುನಾವಣೆ ನಡೆಯದೆ ಸುಮಾರು 2 ವರ್ಷಗಳಿಂದ ಚುನಾಯಿತ ಸದಸ್ಯರಿಲ್ಲದ, ಈ ತಾ.ಪಂ. ಸಭೆಯಲ್ಲಿ ವಸತಿ ಯೋಜನೆಯ ನೋಡಲ್ ಅಧಿಕಾರಿ ಅಶೋಕ್, ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿ ಪ್ರತಿ ಗ್ರಾಪಂ ಮಟ್ಟದಲ್ಲಿ ಒಬ್ಬ ಸರ್ವೆಯರನ್ನು ನಿಯೋಜಿಸಲಾಗಿದೆ. ಈ ಯೋಜನೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ತಲಾ 1.75 ಲಕ್ಷ ರು. ನೀಡಲಾಗುತ್ತದೆ ಎಂದರು.ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆಗಳ ನಿಯಂತ್ರಣದ ಕುರಿತು ಮನೆಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದೆ. ಈ ಸಂಬಂಧ ನಗರ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ರೋಗದ ಲಕ್ಷ್ಮಣ ಕಂಡುಬರುವ ಕಾರ್ಮಿಕರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಳೆ ಹಾಗೂ ನೆರೆಯ ಹಿನ್ನೆಲೆಯಲ್ಲಿ ಇಲಾಖೆಯಿಂದ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ನೆರೆಯಿಂದಾಗಿ ವಾಂತಿಬೇಧಿಯಂತಹ ಕಾಯಿಲೆಗಳು ಕಂಡುಬರುವುದರಿಂದ ಆರೋಗ್ಯ ಕಾರ್ಯಕರ್ತರನ್ನು ಸಜ್ಜು ಮಾಡಲಾಗಿದೆ ಎಂದು ಅವರು ಹೇಳಿದರು.ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.