ಹಾವೇರಿ: ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯಬೇಕಿರುವ ಪ್ರತಿಯೊಂದು ಸೌಲಭ್ಯಗಳು ಕಡ್ಡಾಯವಾಗಿ ತಲುಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಜಿಲ್ಲಾ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಂದು ವರ್ಗಗಳ ಕಲ್ಯಾಣ ಕೈಕೊಳ್ಳುವುದು ಪ್ರತಿ ಇಲಾಖೆಯ ಜವಾಬ್ದಾರಿಯಾಗಿದೆ ಎಂದರು.ಅಂಗನವಾಡಿ ಮಕ್ಕಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಒಂದನೇ ತರಗತಿ ಪ್ರವೇಶಕ್ಕೆ ಅರ್ಹವಿರುವ ಮಕ್ಕಳನ್ನು ಶಾಲೆಗಳಿಗೆ ಸೇರ್ಪಡೆಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಮನೆ ಮನೆ ಸಮೀಕ್ಷೆ ನಡೆಸಿ ಮಕ್ಕಳನ್ನು ಗುರುತಿಸಿ ಶಾಲೆಗಳಿಗೆ ಸೇರಿಸುವಂತೆ ಸೂಚಿಸಬೇಕು. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತಿ ಮೂಡಿಸಬೇಕು. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು. ಹಾಗೆಯೇ ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ ನಿರ್ದೇಶನಾಲಯ (EDCS) ಮೊಬೈಲ್ ಅಪ್ಲಿಕೇಶನ್‌ನ್ನು ಅಭಿವೃದ್ಧಿಪಡಿಸಿದೆ, ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಸಮೀಕ್ಷೆ ಮಾಡುತ್ತದೆ. ಆ ಮೂಲಕ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ತರುವಂತಹ ಕಾರ್ಯವಾಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಹಾಗೂ ಶೌಚಾಲಯಗಳ ದುರಸ್ತಿ ಜೊತೆಗೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು. ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಕೌಶಲ್ಯ ಘಟಕಗಳನ್ನು ಗುರುತಿಸಿ ಯುವಕರ ಕೌಶಲ್ಯಕ್ಕೆ ಅನುಗುಣವಾಗಿ ಸೂಕ್ತ ತರಬೇತಿ ನೀಡಿ ಉದ್ಯೋಗಸ್ಥರನ್ನಾಗಿ ಮಾಡಬೇಕು. ಹಾಗೆಯೇ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಇರುವಂತಹ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ, ಅದರ ಸೌಲಭ್ಯಗಳು ಅವರಿಗೆ ತಲುಪಿಸುವಲ್ಲಿ ಕ್ರಮ ವಹಿಸಬೇಕು ಎಂದರು.ಕೊಳಗೇರಿ ಪ್ರದೇಶಗಳಲ್ಲಿನ ಮಕ್ಕಳು ಹಾಗೂ ವಿಕಲಚೇತನರಿಗಾಗಿ ಸರ್ಕಾರದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬುದರ ಕುರಿತು ಮಾಹಿತಿ ಬಂದಿದ್ದು, ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯ ಎಲ್ಲ ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಸಮೀಕ್ಷೆ ಮಾಡಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅನುಕೂಲಕ್ಕಾಗಿ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಸಿಗುವಂತಾಗಬೇಕು. ಬ್ಯಾಂಕುಗಳು ಯಾವುದೇ ಕಾರಣಕ್ಕೂ ಶೈಕ್ಷಣಿಕ ಸಾಲ ನೀಡುವುದನ್ನು ನಿರಾಕರಿಸುವಂತಿಲ್ಲ, ಬ್ಯಾಂಕುಗಳ ಮಾರ್ಗಸೂಚಿ ಪ್ರಕಾರ ಸಾಲ ನೀಡಲು ಮುಂದಾಗಬೇಕು ಎಂದರು.ಆಯೋಗಕ್ಕೆ ನೇಮಕವಾದಂತಹ ನಾಮನಿರ್ದೇಶಿತ ಸದಸ್ಯರುಗಳು ನಿಯಮಿತವಾಗಿ ಸಭೆಗಳನ್ನು ಮಾಡಿ, ತಮ್ಮ ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಆಲಿಸಿ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಲ್ಪಸಂಖ್ಯಾತ ಕಲ್ಯಾಣ ಆಯೋಗದ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಬ್ದುಲ್‌ರಶೀದ ಮಿರ್ಜನ್ನವರ ಸ್ವಾಗತಿಸಿದರು.ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳಬೇಕು
ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯಬೇಕಿರುವ ಪ್ರತಿಯೊಂದು ಸೌಲಭ್ಯಗಳು ಕಡ್ಡಾಯವಾಗಿ ತಲುಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.