ಹಾವೇರಿ: ಜಿಲ್ಲೆಯಲ್ಲಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ತಮ್ಮ ಮಳಿಗೆ ಮುಂದೆ ಕಡ್ಡಾಯವಾಗಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಪ್ರದರ್ಶಿಸಬೇಕು. ರೈತರ ಎಫ್‌ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಮೇಲೆ ಗೊಬ್ಬರ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 2026ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು, ದಾಸ್ತಾನು ಮತ್ತು ವಿತರಣೆ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಬಿಲ್ ನೀಡದೇ ಇರುವುದು, ಅವಧಿ ಮೀರಿದ ಕೃಷಿ ಪರಿಕರಗಳನ್ನು ವಿತರಣೆ ಮಾಡುವುದು ಅಥವಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಅಂತಹ ಮಾರಾಟಗಾರರ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.ಮಾರಾಟಗಾರರು ಯೂರಿಯಾ ರಸಗೊಬ್ಬರ ವಿತರಣೆಯನ್ನು ಮಾಡುವಾಗ ಕಡ್ಡಾಯವಾಗಿ ಪಾಯಿಂಟ್ ಆಪ್ ಸೇಲ್ ಯಂತ್ರದ ಮತ್ತು ಕೆ-ಕಿಸಾನ ತಂತ್ರಾಂಶದ ಮೂಲಕ ರೈತರ ಎಫ್‌ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಮೇಲೆ ಮಾರಾಟ ಮಾಡಬೇಕು. ಆದ್ದರಿಂದ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಈ ಕುರಿತು ರೈತರಿಗೆ ಸೂಕ್ತ ತಿಳುವಳಿಕೆ ನೀಡಿ ಕಡ್ಡಾಯವಾಗಿ ಆಧಾರ ಸಂಖ್ಯೆಯನ್ನು ಪಡೆದು ರಸಗೊಬ್ಬರ ವಿತರಣೆ ಮಾಡಲು ಸೂಚಿಸಿದರು.ಜಂಟಿ ಕೃಷಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.28 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಿದ್ದು, ಇದಕ್ಕೆ ಪ್ರಮುಖವಾಗಿ ಅವಶ್ಯಕವಿರುವ ಗೋವಿನ ಜೋಳ, ಸೋಯಾಅವರೆ, ಶೇಂಗಾ ಮತ್ತು ಇತರೆ ಬೆಳೆಗಳ ವಿತರಣೆಗಾಗಿ 19 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 23 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮೂಲಕ ಬೀಜ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಪ್ರಸಕ್ತ 2026-27ನೇ ಸಾಲಿನ ಮುಂಗಾರು ಬೆಳೆಗಳಿಗೆ ವಿವಿಧ ವಿಧದ ಒಟ್ಟು 1,41,875 ಮೆ.ಟನ್ ರಸಗೊಬ್ಬರಗಳ ಬೇಡಿಕೆ ಇದ್ದು ಜಿಲ್ಲೆಗೆ ಅವಶ್ಯಕವಿರುವ ರಸಗೊಬ್ಬರವನ್ನು ವಿವಿಧ ಸಂಸ್ಥೆಗಳಿಂದ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರವನ್ನು ಹಂತಹಂತವಾಗಿ ಸರಬರಾಜಾಗುತ್ತಿದ್ದು ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.ರೈತರು ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ 500 ಮಿಲಿ ಬಾಟಲ್ ನ್ಯಾನೊ ಡಿಎಪಿ ಮತ್ತು ನ್ಯಾನೊ ಯೂರಿಯಾಗಳನ್ನು ಪ್ರತಿ ಎಕರೆಗೆ ಬಳಸಬಹುದಾಗಿರುತ್ತದೆ. ಬಿತ್ತನೆ ವೇಳೆ 4 ಎಂಎಲ್ ಪ್ರತಿ ಕೆಜಿಗೆ ನ್ಯಾನೊ ಡಿಎಪಿಯಿಂದ ಉಪಚರಿಸಬೇಕು. 15ರಿಂದ 20 ದಿನ ಇರುವಾಗ ಪ್ರತಿ ಎಕರೆಗೆ 500 ಎಂಎಲ್ ನ್ಯಾನೊ ಡಿಎಪಿಯಿಂದ ಸಿಂಪರಣೆ ಮಾಡಬೇಕು ಎಂದರು.ರೈತರು ರಸಗೊಬ್ಬರವನ್ನು ಬಳಸುವಾಗ ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿಎಪಿ ಜೊತೆಗೆ ಗಂಧಕ ಒದಗಿಸುವ 20:20:0:13 ಹಾಗೂ ಇತರೆ ಕಾಂಪ್ಲೆಕ್ಸ ಗೊಬ್ಬರಗಳಾದ 15:15:15, 10:26:26, 12:32:16 ಗಳನ್ನು ಬಳಸಬೇಕು. ಇವುಗಳ ಬಳಕೆಯಿಂದ ಮಣ್ಣಿಗೆ ಪೊಟ್ಯಾಷ ಗೊಬ್ಬರವನ್ನು ಸಹ ಒದಗಿಸಿದಂತಾಗುತ್ತದೆ ಎಂದರು. ಸಭೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರು ಹಾಜರಿದ್ದರು.ಕಡ್ಡಾಯವಾಗಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಪ್ರದರ್ಶಿಸಬೇಕು-ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿರುವ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ತಮ್ಮ ಮಳಿಗೆ ಮುಂದೆ ಕಡ್ಡಾಯವಾಗಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಪ್ರದರ್ಶಿಸಬೇಕು. ರೈತರ ಎಫ್‌ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಮೇಲೆ ಗೊಬ್ಬರ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.