ಸೀಗೇಹಳ್ಳಿ ಪಿಎಸಿಎಸ್ ನಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

| Published : Apr 30 2025, 12:31 AM IST

ಸಾರಾಂಶ

ತಾಲೂಕಿನ ಸೀಗೆಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರುಗಳ ದುರುಪಯೋಗವಾಗಿದೆ. ಆದ್ದರಿಂದ ಕೂಲಂಕುಶವಾಗಿ ತನಿಖೆ ಮಾಡಬೇಕೆಂದು ಸೀಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಹರಳಹಳ್ಳಿಯ ಎಚ್. ಎಸ್.ಪುಟ್ಟೇಗೌಡ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಸೀಗೆಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರುಗಳ ದುರುಪಯೋಗವಾಗಿದೆ. ಆದ್ದರಿಂದ ಕೂಲಂಕುಶವಾಗಿ ತನಿಖೆ ಮಾಡಬೇಕೆಂದು ಸೀಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಹರಳಹಳ್ಳಿಯ ಎಚ್. ಎಸ್.ಪುಟ್ಟೇಗೌಡ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಿಪಟೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿರುವ ಅವರು ಈ ಸಂಘದಲ್ಲಿ ಸುಮಾರು 2300 ಮಂದಿ ಸದಸ್ಯರಿದ್ದಾರೆ. ಇವರ ಪೈಕಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಮೃತಹೊಂದಿದ್ದಾರೆ. ಮೃತ ಹೊಂದಿದ ಸದಸ್ಯರ ಷೇರು ಹಣವನ್ನು ಸಂಘದಿಂದ ಹಿಂತಿರುಗಿಸಿಲ್ಲ. ಅಥವಾ ಅವರ ವಾರಸುದಾರರಿಗೆ ಷೇರನ್ನು ನೀಡಿಲ್ಲ ಎಂದು ದೂರಿದರು. ಸುಮಾರು 50 ವರ್ಷಗಳ ಇತಿಹಾಸ ಇರುವ ಈ ಸಂಘ ಲಾಭವನ್ನೇ ಕಂಡಿಲ್ಲ. ಪ್ರತಿ ವರ್ಷ 10 ರಿಂದ 20 ಲಕ್ಷ ರು. ಆಡಳಿತಾತ್ಮಕ ನಷ್ಟ ಆಗಿದೆ ಎಂದು ನಮೂದಿಲಾಗಿದೆ. ಒಟ್ಟು ಇದುವರೆಗೂ ಒಂದು ಕೋಟಿಯಷ್ಟು ಅವ್ಯವಹಾರ ಆಗಿರುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್ ನಲ್ಲೇ ಈ ಸಂಘದ ಆಡಳಿತ ಮಂಡಲಿಯ ಅಧಿಕಾರ ಅಂತ್ಯವಾಗಿದೆ. ಇದುವರೆಗೂ ಸರಿಯಾದ ಮತಪಟ್ಟಿ ತಯಾರಿಸದೇ ಇರುವುದೂ, ಲೆಕ್ಕ ಪತ್ರವನ್ನು ಸರಿಯಾಗಿ ನೀಡದೇ ಇರುವ ಹಿನ್ನೆಲೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯಾಗಲು ಚುನಾವಣೆ ನಡೆಸಿಲ್ಲ. ಇದುವರೆಗೂ ಇದ್ದ ಸಂಘದ ನಿರ್ದೇಶಕರಿಗೆ ಅಲ್ಲದೇ ಸದಸ್ಯರಿಗೆ ಹಾಲಿ ಸಿಇಒ ಆಗಿರುವ ಕೆ.ಟಿ.ಶ್ರೀನಿವಾಸ್ ಗೌರವವನ್ನೇ ನೀಡುವುದಿಲ್ಲ. ದುರಹಂಕಾರದಿಂದ ವರ್ತಿಸುತ್ತಾರೆ. ಸಂಘದಲ್ಲಿ ಕೇವಲ 3 ಮಂದಿ ಸಿಬ್ಬಂದಿ ಇದ್ದಾರೆ. ಆದರೆ ಐದಾರು ಮಂದಿಯನ್ನು ನೇಮಕ ಮಾಡಿಕೊಂಡಿರುವುದಾಗಿ ಸಂಘದಲ್ಲಿ ನಮೂದಿಸಿದ್ದಾರೆ ಎಂದು ಎಚ್.ಎಸ್.ಪುಟ್ಟೇಗೌಡ ಆಪಾದಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ದೊಡ್ಡ ನಿಂಗೇಗೌಡ, ದ್ವಾರನಹಳ್ಳಿಯ ಬಿ.ಅಬ್ಬಿಕುಮಾರ್, ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಯರದೇಹಳ್ಳಿಯ ಬೆಟ್ಟೇಗೌಡ, ಅರಳಕೆರೆ ನಿಂಗಣ್ಣ, ಸಿದ್ದನಹಟ್ಟಿಯ ಶಿವರಾಜು ಮತ್ತು ಲೋಕೇಶ್ ಉಪಸ್ಥಿತರಿದ್ದರು.