ಡಿಜಿಪಿ ಅಲೋಕ್‌ ಮೋಹನ್‌ ಅಧಿಕಾರ 22 ದಿನ ವಿಸ್ತರಣೆ

| Published : Apr 30 2025, 12:31 AM IST

ಸಾರಾಂಶ

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರ ಅಧಿಕಾರಾವಧಿ 22 ದಿನಗಳಿಗೆ ವಿಸ್ತರಣೆ ಮಾಡಿದ ಸರ್ಕಾರ, ಮುಂದಿನ ಸಾರಥಿ ಆಯ್ಕೆಗೆ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಶಿಫಾರಸು ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರ ಅಧಿಕಾರಾವಧಿ 22 ದಿನಗಳಿಗೆ ವಿಸ್ತರಣೆ ಮಾಡಿದ ಸರ್ಕಾರ, ಮುಂದಿನ ಸಾರಥಿ ಆಯ್ಕೆಗೆ ಎಂಟು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಶಿಫಾರಸು ಮಾಡಿದೆ.

ಹಾಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು ಬುಧವಾರ ನಿವೃತ್ತಿಯಾಗಬೇಕಿತ್ತು. ಆದರೆ ಸುಪ್ರೀಂಕೋರ್ಟ್‌ ಆದೇಶ ಮುಂದಿಟ್ಟು ಅವರಿಗೆ ಮೇ 21ರವರೆಗೆ ಆಡಳಿತ ನಡೆಸಲು ಸರ್ಕಾರ ಅವಕಾಶ ನೀಡಿದೆ. ಈ ಮೂಲಕ ಅಧಿಕಾರ ವಿಸ್ತರಣೆ ಪಡೆದ ಮೊದಲ ಡಿಜಿ-ಐಜಿಪಿ ಎಂಬ ಚಾರಿತ್ರಿಕ ದಾಖಲೆಗೆ ಅಲೋಕ್ ಮೋಹನ್ ಪಾತ್ರರಾಗಿದ್ದಾರೆ. ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿ ಡಿಜಿಪಿ ಅಧಿಕಾರ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ನಾಲ್ಕು ತಿಂಗಳ ಅಧಿಕಾರ ಬಯಸಿದ್ದ ಅಲೋಕ್ ಮೋಹನ್ ಅ‍ವರಿಗೆ 22 ದಿನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಡಿಜಿಪಿ ಪಟ್ಟಿಯಲ್ಲಿ ಸಂಭವನೀಯರು:

ಸಿಐಡಿ ಡಿಜಿಪಿ ಡಾ। ಎಂ.ಸಲೀಂ, ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌, ಕಾರಾಗೃಹದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಮಲ ಮಗಳ ವಿರುದ್ಧ ಚಿನ್ನ ಕಳ್ಳ ಸಾಗಣೆ ಪ್ರಕರಣದಿಂದ ರಜೆ ಮೇಲಿರುವ ಡಿಜಿಪಿ ರಾಮಚಂದ್ರ ರಾವ್‌, ಎಸ್‌ಸಿಆರ್‌ಬಿ ಡಿಜಿಪಿ ಪ್ರಣವ್ ಮೊಹಂತಿ, ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರು ಮುಂದಿನ ಡಿಜಿಪಿ ಹುದ್ದೆಗೆ ಶಿಫಾರಸುಗೊಂಡಿವೆ.

ಈ ಎಂಟರ ಪೈಕಿ ಮೂವರನ್ನು ಅಂತಿಮ ಪಟ್ಟಿಗಾಗಿ ಪರಿಗಣಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಸಲೀಂ ಹೆಸರು ಮುಂಚೂಣಿ:

ಈ ಎಂಟು ಹಿರಿಯ ಅಧಿಕಾರಿಗಳ ಪೈಕಿ ಇದೇ ಜೂನ್‌ನಲ್ಲಿ ಮಾಲಿನಿ ಅವರು ನಿವೃತ್ತಿಯಾಗಲಿದ್ದಾರೆ. ಅದೇ ರೀತಿ ಕಡ್ಡಾಯ ರಜೆ ಮೇಲಿರುವ ಕಾರಣ ರಾಮಚಂದ್ರ ರಾವ್ ಅವರಿಗೆ ಅವಕಾಶ ಸಿಗುವುದು ಅನುಮಾನ. ಹೀಗಾಗಿ ಕೊನೆಗೆ ಸೇವಾ ಹಿರಿತನ ಆಧಾರದ ಮೇರೆಗೆ ಸಲೀಂ, ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಪ್ರಣವ್ ಮೊಹಾಂತಿ ಅ‍ವರು ಅಂತಿಮ ಪಟ್ಟಿಯಲ್ಲಿ ಶಿಫಾರಸು ಪಡೆಯಬಹುದು. ಈ ಮೂವರಲ್ಲಿ ಡಿಜಿಪಿ ಹುದ್ದೆಗೆ ಸಲೀಂ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.ಎರಡು ವರ್ಷ ನಿಯಮಕ್ಕೆ ಆಕ್ಷೇಪ

ಡಿಜಿ-ಐಜಿಪಿ ಹುದ್ದೆಗೆ ಎರಡು ವರ್ಷಗಳ ಸೇವಾವಧಿ ನಿಗದಿ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲೋಕ್ ಮೋಹನ್ ಅವರಿಗೆ ನೀಡಿದಂತೆ ಮುಂಬರುವ ಎಲ್ಲರಿಗೂ ಅವಕಾಶ ನೀಡಿದರೆ ಹಲವು ಅಧಿಕಾರಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ಸರ್ಕಾರ ನಿಯಮ ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ.