ಶಿರಹಟ್ಟಿ: ಈ ವರ್ಷ ಮುಂಗಾರು ಮಳೆ ತೀವ್ರವಾಗಿ ಕುಂಠಿತಗೊಂಡ ಪರಿಣಾಮ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಸರ್ಕಾರಕ್ಕೆ ಆಗ್ರಹಿಸಿದರು.ಭಾನುವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜರುಗಿದ ವಿಪತ್ತು ನಿರ್ವಹಣಾ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಅಧಿಕಾರಿಗಳು ನೀಡಿದ ಮಾಹಿತಿಯಂತೆ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಅಲ್ಲಲ್ಲಿ ತೊಗರಿ, ಹತ್ತಿ, ಶೇಂಗಾ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಬಾಡುವ ಸ್ಥಿತಿಗೆ ತಲುಪಿವೆ ಎಂದರು.
ವಿಮಾ ಕಂಪನಿಯ ಏಜೆಂಟರ್: ತಾಲೂಕಿನ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿಯ ಮಳೆ ಮಾಪಕ ಕೇಂದ್ರಗಳು ಬಂದಾಗಿವೆ. ಇದನ್ನು ಗಮನಿಸದೇ ಅಧಿಕಾರಿಗಳು ಯವುದೇ ಕಾರಣಕ್ಕೂ ವಾಸ್ತವ ಸ್ಥಿತಿಗತಿ ಅರಿಯದೇ ತಪ್ಪು ಮಾಹಿತಿ ಕೊಡಬೇಡಿ. ಬೆಳೆಹಾನಿ ಕುರಿತು ಬೇರೊಬ್ಬರನ್ನು ಅವಲಂಬಿಸದೇ ಸಂಬಂಧಿಸಿದ ಅಧಿಕಾರಿಗಳು ರೈತರ ಹೊಲಕ್ಕೆ ಬೇಟಿ ನೀಡಿ ಬೆಳೆಯ ನಿಖರ ಮಾಹಿತಿ ಪಡೆದುಕೊಂಡು ದಾಖಲೆ ಸಮೇತ ವರದಿ ನೀಡಬೇಕು ಎಂದು ಸೂಚನೆ ನೀಡಿದರು.ಬೆಳೆವಿಮೆ ಹಣ ರೈತರ ಖಾತೆಗೆ ಜಮೆಯಾಗುವಲ್ಲಿ ಕಳೆದ ವರ್ಷ ಬಾರಿ ಗೋಲ್‌ಮಾಲ್ ಆಗಿದೆ. ರಾಜ್ಯದ ಬಹುತೇಕ ಜಿಲ್ಲೆಯ ರೈತರು ಬೆಳೆವಿಮೆ ಹಣ ಪಡೆದುಕೊಂಡಿದ್ದಾರೆ. ಆದರೆ ಶಿರಹಟ್ಟಿ ತಾಲೂಕಿನಲ್ಲಿ ಬೆಳೆವಿಮೆ ತುಂಬಿದ ನಿಜವಾದ ರೈತರಿಗೆ ವಿಮೆ ಹಣ ಸಿಕ್ಕಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇಂಥ ಅಧಿಕಾರಿಗಳಿಗೆ ರೈತರ ಶಾಪ ತಟ್ಟದೇ ಹೋಗಲ್ಲ ಎಂದು ಎಚ್ಚರಿಸಿದರು.ಮೊದಲು ಪಿಆರ್‌ಒಗಳನ್ನು ಬದಲಿಸಿ: ರೈತರ ಹೊಲಕ್ಕೆ ಬೆಳೆಹಾನಿ ಸಮಿಕ್ಷೆಗೆ ತೆರಳುವ ಪಿಆರ್‌ಒ ಖಾಸಗಿ ವ್ಯಕ್ತಿಗಳನ್ನು ಮೊದಲು ಬದಲಿಸಿ. ಇವರಿಂದಲೇ ನಿಜವಾದ ರೈತರು ಬೆಳೆವಿಮೆ ಹಣ ದೊರೆಯದೇ ವಂಚಿತರಾಗಿದ್ದಾರೆ. ವಿಮಾ ಕಂಪನಿಯವರು ರೈತರ ಮೇಲೆ ಹಲ್ಲೆ ಮಾಡಿ ಹಣ ಕಿತ್ತುಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಷ್ಟೆಲ್ಲ ದಬ್ಬಾಳಿಕೆ, ಗುಂಡಾಗಿರಿ ನಡೆದರೂ ತಹಸೀಲ್ದಾರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪಿಆರ್‌ಒ ಅವರನ್ನು ಬದಲಿಸುತ್ತಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.ಜೂಜುಕೋರರನ್ನು ಮಟ್ಟಾ ಹಾಕಿ: ತಾಲೂಕಿನ ಬೆಳ್ಳಟ್ಟಿ, ವಡವಿ, ಸುಗನಹಳ್ಳಿ, ನೆಲೋಗಲ್, ಸೂರಣಗಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ರಾಜಾರೋಷವಾಗಿ ಒಸಿ, ಇಸ್ಪೀಟ್ ಜೂಜಾಟ ಹೆಚ್ಚಾಗಿದೆ. ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಮನೆ, ಫಾರ್ಮ ಹೌಸ್‌ಗಳಲ್ಲಿಯೇ ರಾಜಾರೋಷವಾಗಿ ಅಕ್ರಮವಾಗಿ ಜೂಜಾಟ ನಡೆಸಿದ್ದಾರೆ. ಇದು ನಿಮ್ಮ ಗಮನಕ್ಕೆ ಇಲ್ಲವೇ ಎಂದು ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಪ್ರಶ್ನಿಸಿದರು.ಎಲ್ಲೋ ಹೋಗಿ ಯಾರೋ ಫೋನ್ ಕರೆ ಮಾಡಿ ಹೇಳಿದ್ದಾರೆ ಎಂದ ಮಾತ್ರಕ್ಕೆ ಅಮಾಯಕರನ್ನು ಬಂಧಿಸಿ ಪ್ರಕರಣ ದಾಖಲಿಸುವ ಬದಲು ನಿಜವಾದ ಜೂಜುಕೋರರು ಯಾರಿದ್ದಾರೆ ಎಂದು ಗುರುತಿಸಿ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದರು. ನಿಮಗೆ ಬೇಕಾದರೆ ದಾಖಲೆ ಕೂಡ ಕೊಡುತ್ತೇನೆ. ಮೊದಲು ಈ ಎಲ್ಲ ಅಕ್ರಮ ಚಟುವಟಿಕೆ ತಡೆಗೆ ಮುಂದಾಗಬೇಕು ಎಂದರು.ಪಿಡಿಒ ವಿರುದ್ದ ಗರಂ: ತಾಲೂಕಿನ ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಬೂದು ನಿರ್ವಹಣಾ ಘಟಕ ಸ್ಥಾಪನೆಗೆ ಸಕಾರದಿಂದ ₹೩ ಕೋಟಿ ಅನುದಾನ ಮಂಜೂರು ಮಾಡಿಸಿದ್ದು, ಶಾಸಕರ ಗಮನಕ್ಕೆ ತರದೇ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಪಿಡಿಒ ಮತ್ತು ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ಠರಾವ್ ಬರೆಸಿದರು.ಸಭೆಯಲ್ಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಶಿರಹಟ್ಟಿ ತಾಪಂ ಇಒ ರಾಮಪ್ಪ ದೊಡ್ಡಮನಿ, ಲಕ್ಷ್ಮೇಶ್ವರ ತಾಪಂ ಇಒ ಮಂಜುಳಾ ಹಕಾರಿ, ಮುಂಡರಗಿ ತಾಪಂ ಇಒ ವಿಜಯಕುಮಾರ ಬೆಣ್ಣಿ ಸೇರಿದಂತೆ ಅನೇಕರು ಇದ್ದರು.ಶಿರಹಟ್ಟಿ ಬರಪೀಡಿತ ತಾಲೂಕೆಂದು ಘೋಷಿಸಲು ಶಾಸಕ ಡಾ. ಚಂದ್ರು ಲಮಾಣಿ ಆಗ್ರಹ
ತಾಲೂಕಿನ ಬೆಳ್ಳಟ್ಟಿ, ವಡವಿ, ಸುಗನಹಳ್ಳಿ, ನೆಲೋಗಲ್, ಸೂರಣಗಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ರಾಜಾರೋಷವಾಗಿ ಒಸಿ, ಇಸ್ಪೀಟ್ ಜೂಜಾಟ ಹೆಚ್ಚಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.