ಈಗಾಗಲೇ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಚಿವರಾಗಿದ್ದಾರೆ. ಈಗ ಹೆಚ್ಚುವರಿಯಾಗಿ ಮತ್ತೊಂದು ಸಚಿವ ಸ್ಥಾನ ಕೊಪ್ಪಳ ಜಿಲ್ಲೆಗೆ ನೀಡುತ್ತಾರೆಯೇ ಎನ್ನುವುದು ಚರ್ಚೆಯಾಗುತ್ತಿರುವ ವಿಷಯ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಸಚಿವ ಸಂಪುಟ ಪುನರ್ ರಚನೆ ಒತ್ತಾಯ ಹಾಗೂ ಒತ್ತಡ ಹೇರುತ್ತಿರುವುದು ಬಹು ಚರ್ಚಿತ ವಿಷಯವಾಗಿದೆ. ಅದರಲ್ಲೂ ಕುಕನೂರಿನಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ 25 ಸಚಿವರನ್ನು ಬದಲಾಯಿಸುವ ಸುಳಿವು ನೀಡಿದ್ದಾರೆ. ಈ ನಡುವೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ದೆಹಲಿಯಲ್ಲಿಯೇ ಬೀಡುಬಿಟ್ಟು ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ.

ಈಗಾಗಲೇ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಚಿವರಾಗಿದ್ದಾರೆ. ಈಗ ಹೆಚ್ಚುವರಿಯಾಗಿ ಮತ್ತೊಂದು ಸಚಿವ ಸ್ಥಾನ ಕೊಪ್ಪಳ ಜಿಲ್ಲೆಗೆ ನೀಡುತ್ತಾರೆಯೇ ಎನ್ನುವುದು ಚರ್ಚೆಯಾಗುತ್ತಿರುವ ವಿಷಯ. ಹಾಗೆ ನೋಡಿದರೆ ಸಚಿವ ಶಿವರಾಜ ತಂಗಡಗಿ ಮುಂದುವರೆಯುವ ಸಾಧ್ಯತೆಯೇ ಹೆಚ್ಚಿದೆ ಎಂದೇ ಹೇಳಲಾಗುತ್ತದೆ. ಆದರೂ ಕೊಪ್ಪಳ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಈ ಬಾರಿ ಸಿಕ್ಕೇ ಸಿಗುತ್ತದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

ನಾನೇನು ಸಚಿವ ಸ್ಥಾನ ಕೇಳುವುದಿಲ್ಲ ಎಂದೇ ಹೇಳುತ್ತಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕೊಟ್ಟರೆ ನಿಭಾಯಿಸುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಕೇಳಿದ್ದಾರೆ. ಅಷ್ಟೇ ಅಲ್ಲ ಹಣಕಾಸು ಸಚಿವರಾಗುವ ಕನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಲ್ ರೆಡ್ಡಿಯನ್ನೊಮ್ಮೆ ಹಣಕಾಸು ಸಚಿವನ್ನಾಗಿ ಮಾಡಬೇಕು ಎಂದು ಬಹಿರಂಗ ವೇದಿಕೆಯ ಮೇಲೆ ಹಲವಾರು ಬಾರಿ ಹೇಳಿದ್ದಾರೆ. ಈಗ ಹಣಕಾಸು ಖಾತೆಯ ನಿರ್ವಹಣೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಬಸವರಾಜ ರಾಯರಡ್ಡಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆರ್ಥಿಕ ಸಚಿವ ಸ್ಥಾನ ಕಷ್ಟಸಾಧ್ಯವಾದರೂ ರಾಯರಡ್ಡಿ ಸಚಿವರಾಗುವುದು ಪಕ್ಕಾ ಎಂದೇ ಹೇಳಲಾಗುತ್ತದೆ.

ಈ ನಡುವೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಶಾಸಕ ರಾಘವೇಂದ್ರ ಹಿಟ್ನಾಳ ಸಚಿವ ಸ್ಥಾನ ನೀಡುವಂತೆ ಬಲವಾಗಿಯೇ ಸಮರ್ಥನೆ ಮಾಡಿಕೊಂಡು ಕೇಳುತ್ತಿದ್ದಾರೆ. ಹಿರಿತನವೂ ಇದೆ. ಹೀಗಾಗಿ, ನನಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹೇರಲು ದೆಹಲಿಗೆ ತೆರಳಿರುವ ಶಾಸಕರ ಗುಂಪಿನಲ್ಲಿದ್ದಾರೆ.

ಅಚ್ಚರಿ ಎಂದರೆ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಇದುವರೆಗೂ ಸಚಿವ ಸ್ಥಾನ ಸಿಕ್ಕಿಯೇ ಇಲ್ಲ. (ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾಗಿದ್ದ ಕೊಪ್ಪಳ ಶಾಸಕ ವಿರುಪಾಕ್ಷಪ್ಪ ಅಗಡಿ ಕೊಪ್ಪಳಕ್ಕೆ ಬರುವ ಮುನ್ನವೇ ಸರ್ಕಾರ ಪತನವಾಗಿತ್ತು. ಇವರು ಒಂದು ವಾರ ಮಾತ್ರ ಸಚಿವರಾಗಿದ್ದನ್ನು ಹೊರತುಪಡಿಸಿದರೆ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಸಚಿವ ಸ್ಥಾನದ ಯೋಗವೇ ಬಂದಿಲ್ಲ) ಹೀಗಾಗಿ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ ಆಪ್ತರು.

ಹೀಗಾಗಿ, ದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕ ರಾಘವೇಂದ್ರ ಹಿಟ್ನಾಳ ಶತಾಯ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯವಾಗಿದ್ದರೂ ಸಹ ಸಚಿವಾಂಕ್ಷಿಗಳೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿರುವುದು ಅಚ್ಚರಿಗೆ ಕಾರಣವಾಗಿದೆ.

ಮೂರು ಬಾರಿ ಗೆಲುವು ಸಾಧಿಸಿದ್ದು, ಹಿರಿತನವೂ ಇರುವುದರಿಂದ ಸಚಿವ ಸ್ಥಾನ ನೀಡುವಂತೆ ಕೇಳುತ್ತಿದ್ದೇವೆ. ಪಕ್ಷದ ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡುತ್ತದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.

ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಇದ್ದು, ಸುಮಾರು 25 ಸಚಿವರನ್ನು ಬದಲಾಯಿಸುವ ಸಾಧ್ಯತೆ ಇದೆ. ನಾನೇನು ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ, , ಕೊಟ್ಟರೆ ನಿಭಾಯಿಸುತ್ತೇನೆ. ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.