-ಶಾಸಕಿ, ಕೆಎಸ್‍ಐಸಿ ಅಧ್ಯಕ್ಷೆ ಕನೀಜ್ ಫಾತಿಮಾ ಸರ್ಕಾರಕ್ಕೆ ಒತ್ತಾಯ । ನೇಮಕಾತಿ ಪ್ರಕ್ರಿಯೆಯಿಂದ ಉರ್ದು-ಮಾಧ್ಯಮ ಶಾಲೆ ಹೊರಗಿಡುವ ಬಗ್ಗೆ ಕಳವಳ

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು-ಮಾಧ್ಯಮ ಬೋಧನಾ ಹುದ್ದೆಗಳನ್ನು ಸೇರಿಸುವಂತೆ ಕಲಬುರಗಿ ಉತ್ತರ ಶಾಸಕಿ ಮತ್ತು ಕೆಎಸ್‍ಐಸಿ ಅಧ್ಯಕ್ಷೆ ಕನೀಜ್ ಫಾತಿಮಾ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಿಂದ ಉರ್ದು-ಮಾಧ್ಯಮ ಶಾಲೆಗಳನ್ನು ಹೊರಗಿಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಉತ್ತರ ಶಾಸಕಿ ಮತ್ತು ಕೆಎಸ್‍ಐಸಿ ಅಧ್ಯಕ್ಷೆ ಕನೀಜ್ ಫಾತಿಮಾ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.

ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಉರ್ದು-ಮಾಧ್ಯಮ ಶಾಲೆಗಳು ಮತ್ತು ಬೋಧನಾ ಉದ್ಯೋಗವನ್ನು ಬಯಸುವ ಸಾವಿರಾರು ಅರ್ಹ ಅಭ್ಯರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯು ಕಲ್ಯಾಣ ಕರ್ನಾಟಕ ಸ್ಥಳೀಯ ಕೇಡರ್‌ ಗೆ 100 ಪ್ರತಿಶತ ಕೋಟಾದಡಿ ಸಹಾಯಕ ಮಾಸ್ಟರ್ ಗ್ರೇಡ್-1 ಮತ್ತು ದೈಹಿಕ ಶಿಕ್ಷಣ ಗ್ರೇಡ್-2 ವಿಭಾಗಗಳ ಅಡಿಯಲ್ಲಿ 2,051 ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಜೈವಿಕ ವಿಜ್ಞಾನ, ಸಮಾಜ ವಿಜ್ಞಾನ, ಭಾಷಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಣದಂತಹ ವಿಷಯಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್-ಮಾಧ್ಯಮ ಶಾಲೆಗಳಿಗೆ ಬೋಧನಾ ಹುದ್ದೆಗಳನ್ನು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.


ನೇಮಕಾತಿ ಅಧಿಸೂಚನೆಯ ಪ್ರಕಾರ, ಒಟ್ಟು 2,051 ಹುದ್ದೆಗಳಲ್ಲಿ 1,789 ಸಹಾಯಕ ಮಾಸ್ಟರ್ ಹುದ್ದೆಗಳು ಮತ್ತು 262 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು. ಕಲಬುರಗಿ ಉತ್ತರ ಶಾಸಕಿ ಮತ್ತು ಕೆಎಸ್‍ಐಸಿ ಅಧ್ಯಕ್ಷೆ ಕನೀಜ್ ಫಾತಿಮಾ, ಉರ್ದು-ಮಾಧ್ಯಮ ಬೋಧನಾ ಹುದ್ದೆಗಳ ಅನುಪಸ್ಥಿತಿಯು ಗಂಭೀರ ಕಳವಳಕಾರಿಯಾಗಿದೆ.

ವಿಶೇಷವಾಗಿ ಈ ಪ್ರದೇಶದಲ್ಲಿ ಹಲವಾರು ಸರ್ಕಾರಿ ಉರ್ದು-ಮಾಧ್ಯಮ ಪ್ರೌಢಶಾಲೆಗಳು ಈಗಾಗಲೇ ಶಿಕ್ಷಕರ ಕೊರತೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ

ಸರ್ಕಾರಿ ಉರ್ದು ಮಾಧ್ಯಮ ಪ್ರೌಢಶಾಲೆಗಳು ಶಿಕ್ಷಕರ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಇದು ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಕ್ಷಣದ ಗುಣಮಟ್ಟದ ಮೇಲೆ ನೇರವ ಪರಿಣಾಮ ಬೀರುತ್ತದೆ ಎಂದು ಅವರು ಒತ್ತಿ ಹೇಳಿದರು.

ಉರ್ದು ಮಾಧ್ಯಮ ಹುದ್ದೆಗಳನ್ನು ಸೇರಿಸುವುದರಿಂದ ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವುದಲ್ಲದೆ, ಅರ್ಹ ಉರ್ದು ಮಾಧ್ಯಮ ಬಿ.ಎಡ್ ಪದವೀಧರರು ಮತ್ತು ಈ ಪ್ರದೇಶದ ಅರ್ಹ ಉರ್ದು ಮಾಧ್ಯಮ ಬಿ.ಎಡ್ ಪದವೀಧರರು ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ನ್ಯಾಯಯುತ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.