ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ ಗಾಂಧೀಜಿ ಬಗೆಗಿನ ದ್ವೇಷವನ್ನು ಬಯಲು ಮಾಡಿಕೊಂಡಿದ್ದು ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನಗಳನ್ನೂ ಸಹ ಗಣನೀಯವಾಗಿ ಕಡಿತಗೊಳಿಸಿ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾನಗಲ್ಲ:ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ ಗಾಂಧೀಜಿ ಬಗೆಗಿನ ದ್ವೇಷವನ್ನು ಬಯಲು ಮಾಡಿಕೊಂಡಿದ್ದು ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನಗಳನ್ನೂ ಸಹ ಗಣನೀಯವಾಗಿ ಕಡಿತಗೊಳಿಸಿ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿರುವ ಖಾತ್ರಿ ಯೋಜನೆ ಗ್ರಾಮೀಣ ಭಾಗದಲ್ಲಿ ವಲಸೆ ತಡೆಗಟ್ಟಿ ನಿರುದ್ಯೋಗ ಮತ್ತು ಬಡತನದ ನಿರ್ಮೂಲನೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಕೇಂದ್ರ ಸರ್ಕಾರವೇ ಪೂರ್ಣ ವೆಚ್ಚ ಭರಿಸುವ ಈ ಯೋಜನೆಯ ಸ್ವರೂಪ ಬದಲಿಸುತ್ತಿರುವ ಕೇಂದ್ರದ ಎನ್.ಡಿ.ಎ. ಸರ್ಕಾರ ಯೋಜನೆಯ ಶೇ. 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸುವಂತೆ ಮಾಡಿರುವುದು ಒಕ್ಕೂಟ ವಿರೋಧಿ ಧೋರಣೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಂಥ ಜನವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿದೆ ಎಂದು ಶ್ರೀನಿವಾಸ ಮಾನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಈ ನಡೆಯಿಂದ ಸ್ಥಳೀಯವಾಗಿ ಉದ್ಯೋಗ ಖಾತ್ರಿ ಇಲ್ಲದೆ ಮತ್ತೆ ಉದ್ಯೋಗಕ್ಕೆ ವಲಸೆ ಹೆಚ್ಚಲಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಸಮಸ್ಯೆ ತಂದೊಡ್ಡಲಿದ್ದು ಇದೊಂದು ಜನವಿರೋಧಿ ನಿರ್ಧಾರವಾಗಿದೆ. ಗಾಂಧೀಜಿ ಹೆಸರನ್ನು ಅಳಿಸುವ ಹುನ್ನಾರ ಬಿಜೆಪಿ ಅವಧಿಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಹಿಂದಿನ ಸರ್ಕಾರದ ಸಂದರ್ಭದಲ್ಲಿ ರೂಪಿಸಿ ಜಾರಿಗೆ ತರಲಾಗಿರುವ ಹತ್ತು, ಹಲವು ಯೋಜನೆ ಮತ್ತು ಕಾರ್ಯಕ್ರಮಗಳ ಹೆಸರು ಮತ್ತು ಸ್ವರೂಪ ಬದಲಿಸಿ, ಮೂಲ ಉದ್ದೇಶ ಮರೆಮಾಚಲಾಗಿದೆ ಎಂದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಖಾತ್ರಿ ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನಗಳನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. 2023-24ರಲ್ಲಿ 14 ಕೋಟಿಗಳಷ್ಟಿದ್ದ ಮಾನವ ದಿನಗಳನ್ನು 2024-25 ರಲ್ಲಿ 13 ಕೋಟಿಗೆ, 2025-26ರ ಸಾಲಿನಲ್ಲಿ ಕೇವಲ 9 ಕೋಟಿಗೆ ಇಳಿಸಿ ದ್ರೋಹ ಎಸಗಲಾಗಿದೆ. ಗಾಂಧೀಜಿ ಅವರ ಸ್ವರಾಜ್ಯದ ಯೋಚನೆ ಹೊಸಕಿ ಹಾಕುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಡಜನ ಮತ್ತು ಕರ್ನಾಟಕ ವಿರೋಧಿ ಕ್ರಮ ಖಂಡನೀಯವಾಗಿದೆ ಎಂದು ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.