ಒಟ್ಟು 188 ಎಕರೆ ಪ್ರದೇಶದಲ್ಲಿ ಹಲವಾರು ವರ್ಷಗಳ ಹಿಂದೆಯೇ ಆರಂಭವಾಗಿರುವ ವಸತಿ ಯೋಜನೆಗಳ ಪೈಕಿ ಇತ್ತೀಚೆಗೆ ಮುಕ್ತಾಯದ ಹಂತಕ್ಕೆ ಬಂದಿರುವ 4ನೇ ಹಂತದ ಯೋಜನೆ, ಒಟ್ಟು 55 ಎಕರೆ ಪ್ರದೇಶವಿದೆ. ಪ್ರಸಾದ ದುಬೆ ಎಂಬವರ 21 ಎಕರೆ ಜಮೀನು ಸಹ ಸ್ವಾಧೀನವಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಹುಬ್ಬಳ್ಳಿ-ಧಾರವಾಡ ಅವಳಿ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು ಹೊಸ-ಹೊಸ ವಸತಿ ಯೋಜನೆಗಳು ನಿರ್ಮಾಣವಾಗುತ್ತಿವೆ. ಈ ಪೈಕಿ ಕರ್ನಾಟಕ ವಸತಿ ಮಂಡಳಿ (ಕೆಎಚ್‌ಬಿ)ಯು ಇಲ್ಲಿಯ ಸತ್ತೂರು ಬಳಿ 4ನೇ ಹಂತದಲ್ಲಿ 55 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.

ಒಟ್ಟು 188 ಎಕರೆ ಪ್ರದೇಶದಲ್ಲಿ ಹಲವಾರು ವರ್ಷಗಳ ಹಿಂದೆಯೇ ಆರಂಭವಾಗಿರುವ ವಸತಿ ಯೋಜನೆಗಳ ಪೈಕಿ ಇತ್ತೀಚೆಗೆ ಮುಕ್ತಾಯದ ಹಂತಕ್ಕೆ ಬಂದಿರುವ 4ನೇ ಹಂತದ ಯೋಜನೆ, ಒಟ್ಟು 55 ಎಕರೆ ಪ್ರದೇಶವಿದೆ. ಪ್ರಸಾದ ದುಬೆ ಎಂಬವರ 21 ಎಕರೆ ಜಮೀನು ಸಹ ಸ್ವಾಧೀನವಾಗಿದೆ. 2022ರಲ್ಲಿಯೇ ಈ ಭೂಮಿ ಸ್ವಾಧೀನಗೊಂಡಿದ್ದು, ಇದುವರೆಗೂ ಭೂಮಾಲೀಕರಿಗೆ ಸರಿಯಾಗಿ ಪರಿಹಾರದ ಹಣ ಬಂದಿಲ್ಲ. ಇದರೊಂದಿಗೆ ಇಲ್ಲಿ ನಡೆಯುತ್ತಿರುವ ವಸತಿ ಯೋಜನೆಯ ಕಾಮಗಾರಿ ಬಗ್ಗೆ ಭೂಮಿ ನೀಡಿದವರು ಹಾಗೂ ಸಾರ್ವಜನಿಕರಿಂದಲೂ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಈ ವಸತಿ ಯೋಜನೆ ಗುತ್ತಿಗೆ ಪಡೆದ ಕಂಪನಿಯು ಕಳಪೆ ಕಾಮಗಾರಿ ಮಾಡಿದ್ದು, ಸುಳ್ಳು ಮಾಹಿತಿ ನೀಡಿ ಸರ್ಕಾರದಿಂದ ಕೋಟ್ಯಂತರ ಹಣ ಪಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮುಂದುವರಿದು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದಿರುವ ಪ್ರಸಾದ ದುಬೆ, ಯೋಜನೆಯಲ್ಲಿ ಆಗಿರುವ ಲೋಪದೋಷಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ.

ಮಣ್ಣಿನ ಬಿಲ್‌ ₹ 2.64 ಕೋಟಿ:

ಈ ವಸತಿ ಯೋಜನೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯು ವಸತಿಗೆ ಯೋಗ್ಯವಲ್ಲ ಎಂಬ ಕಾರಣ ನೀಡಿ, ಆ ಮಣ್ಣು ತೆಗೆದು ಬೇರೆ ಮಣ್ಣು ಹಾಕಲು ₹2.64 ಕೋಟಿ ಬಿಲ್ ಪಡೆಯಲಾಗಿದೆ. ಬಳಿಕ ರೂಲಿಂಗ್ ಮತ್ತು ವೈಬ್ರೇಶನ್ ಕೂಡ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ವಿಚಿತ್ರ ಎಂದರೆ, ಅಸಲಿಗೆ ಇಲ್ಲಿರುವ ಮಣ್ಣು ಮನೆ ನಿರ್ಮಾಣಕ್ಕೆ ಅತ್ಯಂತ ಯೋಗ್ಯವಾಗಿದ್ದು, ಬೈಪಾಸ್‌ ರಸ್ತೆ ಕಾಮಗಾರಿಗೆ ಇದೇ ಭೂಮಿಯ ಮೊರಂ ಮಣ್ಣು ಸಹ ಬಳಸಲಾಗಿದೆ. ಆದರೆ, ಗುತ್ತಿಗೆದಾರರು ಮಣ್ಣಿನ ಗುಣಮಟ್ಟವೇ ಸರಿ ಇಲ್ಲ ಎನ್ನುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಇನ್ನು, ಮಣ್ಣನ್ನು ಬೇರೆಡೆಯಿಂದ ಇಲ್ಲಿ ತಂದು ಹಾಕಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ತುಂಬಿರುವ ರಾಯಲ್ಟಿ ಬಗ್ಗೆಯೂ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಕೋಟಿಗಟ್ಟಲೇ ಹಣ ಕೊಟ್ಟು ಮಣ್ಣು ತಂದು ಹಾಕಿರುವುದು ಸುಳ್ಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ವಸತಿ ಯೋಜನೆಯಲ್ಲಿ ನೀರಿನ ಟ್ಯಾಂಕ್‌ ನಿರ್ಮಾಣದ ಸಂದರ್ಭದಲ್ಲಿ ಭೂಮಿಯಲ್ಲಿ ಕಲ್ಲು ಬಂದಿದ್ದು, ಅದನ್ನು ಹೊರ ತೆಗೆಯಲು ₹ 79 ಲಕ್ಷದ ಬಿಲ್ ನೀಡಲಾಗಿದೆ. ಅಸಲಿಗೆ ಈ ಪ್ರದೇಶದಲ್ಲಿ ಕಲ್ಲಿನ ನಿಕ್ಷೇಪವೇ ಇಲ್ಲ. ಒಂದು ವೇಳೆ ಕಲ್ಲಿದ್ದರೂ ಅದನ್ನು ತೆರೆವುಗೊಳಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಬೇಕಲ್ಲವೇ ಎಂಬ ಪ್ರಶ್ನೆಗಳು ಸ್ಥಳೀಯರನ್ನು ಕಾಡುತ್ತಿವೆ.

ಈ ವಸತಿ ಯೋಜನೆಯಲ್ಲಿ ಮಾಡಲಾಗಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಫ್ಯೂಜನ್ ಸ್ಯಾಡಲ್ ಪೈಪ್ ಹಾಕಿದ್ದೇವೆ ಎಂದು ಮಾಹಿತಿ ಹಕ್ಕಿನ ಅಡಿ ಕೇಳಲಾದ ದಾಖಲೆಗಳಲ್ಲಿ ತೋರಿಸಿದ್ದು, ನೈಜವಾಗಿ ನೋಡಿದಾಗ ಪಿವಿಸಿಯ ಸಾದಾ ಪೈಪ್‌ಗಳನ್ನು ಅಳವಡಿಸಲಾಗಿದೆ. ಅದಕ್ಕೆ ₹ 30 ಲಕ್ಷ ತೋರಿಸಲಾಗಿದೆ. ಇದೆಲ್ಲಕ್ಕಿಂತ ಆಘಾತಕಾರಿ ವಿಚಾರವೆಂದರೆ, ಈ ಲೇಔಟ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ₹ 87 ಲಕ್ಷ ತೋರಿಸಿದ್ದು, ಬೇರೆ ರಸ್ತೆಯ ಫೋಟೋ ಬಳಸಲಾಗಿದೆ ಎಂದು ದುಬೆ ಆರೋಪಿಸುತ್ತಾರೆ.

ಇನ್ನು, ಇಲ್ಲಿ ನಿರ್ಮಿಸಲಾದ ಒಳಚರಂಡಿ ಚೇಂಬರ್‌ಗಳು ಈಗಾಗಲೇ ಒಡೆದಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಗುತ್ತಿಗೆದಾರರು ಹಾಗೂ ಇದಕ್ಕೆ ಸಹಾಯ ಮಾಡಿದ ಅಧಿಕಾರಿಗಳ ಮೇಲೂ ಕ್ರಮವಾಗಬೇಕೆಂದು ಸ್ಥಳೀಯರು ಆಗ್ರಹಿಸುತ್ತಾರೆ.

ತಪ್ಪಿದ್ದರೆ ಕ್ರಮ..

ಯಾವುದೇ ಯೋಜನೆಯನ್ನು ಡಿಪಿಆರ್‌ ಪ್ರಕಾರವೇ ಕೆಲಸ ಮಾಡಬೇಕು. ಆದರೆ, ಇಲ್ಲಿ ಆಗಿರುವ ಕೆಲವು ಅಭಿವೃದ್ಧಿ ಕುರಿತಾಗಿ ಸ್ಥಳೀಯರಿಂದ ದೂರುಗಳು ಬಂದಿದ್ದು ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ತಪ್ಪಾಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.

ದಯಾನಂದ, ಆಯುಕ್ತರು, ಕೆಎಚ್‌ಬಿ ಆಯುಕ್ತರು