ಕಾರ್ಕಳ: ಸರ್ಕಾರಿ ನರ್ಸಿಂಗ್ ಕಾಲೇಜಿನ ತಾಂತ್ರಿಕ ತೊಂದರೆ ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಶೀಘ್ರದಲ್ಲೇ ಗುರುತಿಸಿರುವ ಹೊಸ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಕಾರ್ಕಳದ ಕಟೀಲ್ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ನಡೆದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿಲ್ಲದಿರುವುದು ವಿಷಾದಕರ. ಸಾಮಾನ್ಯವಾಗಿ ಮೆಡಿಕಲ್ ಕಾಲೇಜು ಇರುವ ಸ್ಥಳದಲ್ಲೇ ಸರ್ಕಾರಿ ನರ್ಸಿಂಗ್ ಕಾಲೇಜುಗಳೂ ಇರುತ್ತವೆ. ಆದರೆ ಕಾರ್ಕಳದ ಈ ಏಕೈಕ ನರ್ಸಿಂಗ್ ಕಾಲೇಜನ್ನು ಯಾವ ವಿಭಾಗಕ್ಕೆ ಸೇರಿಸಬೇಕು ಎಂಬ ಗೊಂದಲ ಸರ್ಕಾರದ ಮಟ್ಟದಲ್ಲಿ ಇತ್ತು. ಈಗ ಸರ್ಕಾರವು ನರ್ಸಿಂಗ್ ಕಾಲೇಜನ್ನು ಮೆಡಿಕಲ್ ವಿಭಾಗದ ಅಧೀನಕ್ಕೆ ಒಳಪಡಿಸಿದೆ ಎಂದು ಹೇಳಿದರು.ಕಾಲೇಜು ಆರಂಭವಾದಾಗ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಹಿನ್ನೆಲೆ ವಿಷಾದ ವ್ಯಕ್ತಪಡಿಸಿದರು. ಕಾಲೇಜು ಆರಂಭದಿಂದಲೇ ಬೊಳಾಸ್ ದಾಮೋದರ್ ಕಾಮತ್ ಅವರು ಅಗತ್ಯ ನೆರವು ನೀಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈ ವರ್ಷ 32 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ನಾಲ್ವರು ರ್‍ಯಾಂಕ್ ಗಳಿಸಿರುವುದು ಸಂತಸದ ಸಂಗತಿ. ಪದವಿ ಪಡೆದ ವಿದ್ಯಾರ್ಥಿಗಳು ಹಸನ್ಮುಖಿಯಾಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲಿ ಎಂದು ಹಾರೈಸಿದರು. ದೇಶದಲ್ಲಿ ನರ್ಸಿಂಗ್ ಕ್ಷೇತ್ರದ ಅಗತ್ಯತೆ ಹೆಚ್ಚುತ್ತಿರುವುದರಿಂದ ಉತ್ತಮ ಅವಕಾಶಗಳಿವೆ ಎಂದು ಹೇಳಿದರು.ಹೊಸ ಕಟ್ಟಡಕ್ಕೆ ಜಾಗ ಗುರುತಿಸಲಾಗಿದ್ದು, ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಉಡುಪಿ ವಿದ್ಯಾರತ್ನ ಕಾಲೇಜಿನ ಪ್ರಾಂಶುಪಾಲೆ ಅನಿತಾ ಸಿ. ರಾವ್ ಮಾತನಾಡಿ, ನರ್ಸಿಂಗ್ ವೃತ್ತಿ ಜ್ಞಾನ, ಕೌಶಲ್ಯ ಮತ್ತು ಮಾನವೀಯತೆಯ ಪ್ರತೀಕವಾಗಿದೆ ಎಂದರು.
ಕಾರ್ಕಳ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಶಿಕಲ ಎಸ್. ಮಾತನಾಡಿ, ಖಾಸಗಿ ಕಾಲೇಜುಗಳ ನಡುವೆ ಬಿಎಸ್‌ಸಿ ನರ್ಸಿಂಗ್‌ನಲ್ಲಿ ಸರ್ಕಾರಿ ಕಾಲೇಜು ಸ್ಪರ್ಧಿಸಿ ರ್‍ಯಾಂಕ್ ಗಳಿಸಿರುವುದು ಹೆಮ್ಮೆಯ ವಿಷಯ ಎಂದರು.
ಉಪಪ್ರಾಂಶುಪಾಲ ಶ್ರೀಧರ್ ಪ್ರಭು, ಸರಕಾರಿ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಕಮಲ, ಪ್ರಾಂಶುಪಾಲೆ ಸಜನಿ ಒ.ಕೆ., ಎಲಿಜಬೆತ್ ಮತ್ತಿತರರಿದ್ದರು.ಉಪನ್ಯಾಸಕಿ ದಿವ್ಯಶ್ರೀ ನಿರೂಪಿಸಿದರು. ಕೃತಿ ಮಾತನಾಡಿದರು. ಉಪನ್ಯಾಸಕಿ ವನಿತಾ ವಂದಿಸಿದರು.