ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಶಾಸಕರು ತಮ್ಮ ಹಿಂಬಾಲಕರಿಗೆ ನೀಡಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವ ಬಗ್ಗೆ ಸಾಕ್ಷಿ ಸಮೇತ ಮುಂದಿಡುತ್ತಿದ್ದು, ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕರು ರುಜುವಾತು ಪಡಿಸಿದರೆ ತಾವು ರಾಜಕೀಯ ಕ್ಷೇತ್ರದಿಂದ ಹೊರಗೆ ಉಳಿಯುವುದಾಗಿ ಕೆಡಿಪಿ ಸದಸ್ಯ ಚೇತನ್ ಕುಮಾರ್ ಸವಾಲು ಹಾಕಿದರು. ಶಾಸಕರ ಆದೇಶದ ನಡುವೆಯೂ ಮತ್ತೆ ಕಳಪೆ ಕಾಮಗಾರಿ ಮುಂದುವರಿದಿದ್ದು ಇದಕ್ಕೆ ಕಾರಣಕರ್ತರು ಯಾರು ಎಂದು ಬಹಿರಂಗ ಪಡಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಶಾಸಕರು ತಮ್ಮ ಹಿಂಬಾಲಕರಿಗೆ ನೀಡಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವ ಬಗ್ಗೆ ಸಾಕ್ಷಿ ಸಮೇತ ಮುಂದಿಡುತ್ತಿದ್ದು, ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕರು ರುಜುವಾತು ಪಡಿಸಿದರೆ ತಾವು ರಾಜಕೀಯ ಕ್ಷೇತ್ರದಿಂದ ಹೊರಗೆ ಉಳಿಯುವುದಾಗಿ ಕೆಡಿಪಿ ಸದಸ್ಯ ಚೇತನ್ ಕುಮಾರ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯಿಂದ ಸುಮಾರು 5 ಲಕ್ಷ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟ ಸಂಪೂರ್ಣ ಕಳಪೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಕಾರಣ, ವಿಷಯವನ್ನು ತಾಲೂಕು ಪಂಚಾಯತ್‌ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದಿದ್ದು, ಅದರಂತೆ ಶಾಸಕರು ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದರು. ಶಾಸಕರ ಆದೇಶದ ನಡುವೆಯೂ ಮತ್ತೆ ಕಳಪೆ ಕಾಮಗಾರಿ ಮುಂದುವರಿದಿದ್ದು ಇದಕ್ಕೆ ಕಾರಣಕರ್ತರು ಯಾರು ಎಂದು ಬಹಿರಂಗ ಪಡಿಸಬೇಕು ಎಂದರು.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಚಿಕ್ಕಬಿಕ್ಕೋಡು ಗ್ರಾಮದ ರಸ್ತೆ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿದೆ ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಕೆಲವರು ಪತ್ರಿಕೆಗಳಿಗೆ ‌ಹೇಳಿಕೆ ನೀಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾಗಿದ್ದು ತಮ್ಮ ರಾಜಕೀಯ ಲಾಭಕ್ಕಾಗಿ ಶಾಸಕರು ಹಿಂಬಾಲಕರಿಂದ ಈ ರೀತಿಯ ಹೇಳಿಕೆಯನ್ನು ಬಿಡುಗಡೆ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ಕಾಮಗಾರಿ 72 ಮೀಟರ್ ಉದ್ದ ಮತ್ತು 3.75 ಮೀಟರ್‌ ಅಗಲದಲ್ಲಿ ನಡೆಯಬೇಕು ಅಂದಾಜು ಪಟ್ಟಿಯಲ್ಲಿ ನಮೂದಿಸಲಾಗಿದೆ. ಆದರೆ ವಾಸ್ತವವಾಗಿ 55 ಮೀಟರ್ ಉದ್ದ ಮಾತ್ರ ಕಾಮಗಾರಿ ನಡೆದಿದ್ದು, ಅಗಲವೂ 3.75 ಮೀಟರ್ ಬದಲು ಕೇವಲ 2.90 ಮೀಟರ್ ಮಾತ್ರ ಮಾಡಿದ್ದಾರೆ. ದಪ್ಪವೂ 6 ಇಂಚುಗಳ ಬದಲು ಕೇವಲ 4 ಇಂಚು ಮಾತ್ರವಾಗಿದೆ. ಮಧ್ಯಭಾಗದಲ್ಲಿ ಜಲ್ಲಿ ಹಾಕಿ ರೋಲಿಂಗ್ ಮಾಡದೇ ಕಾಮಗಾರಿ ನಡೆಸಲಾಗಿದ್ದು, 17 ಮೀಟರ್ ಅಳತೆಯ ಕಾಮಗಾರಿಯನ್ನು ಗೋಲ್ಮಾಲ್ ಮಾಡಲಾಗಿದೆ. ಇಷ್ಟಾದರೂ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟದ್ದಾಗಿದೆ ಎಂದು ಸ್ಥಳೀಯರನ್ನು ನಂಬಿಸುತ್ತಿದ್ದಾರೆ. ಸರಿಯಾದ ಅಳತೆ ಮತ್ತು ಗುಣಮಟ್ಟದ ಕೆಲಸ ನಡೆಯದೆ ಇದ್ದರೆ ಹೇಗೆ ಬಿಲ್ ಪಾವತಿ ಸಾಧ್ಯ . ಗುತ್ತಿಗೆದಾರ ಪ್ರಣೀತ್ ಅವರು ಅಗತ್ಯವಿರುವ 12 ಚೀಲ ಸಿಮೆಂಟ್ ಬಳಕೆಗೆ ಬದಲಾಗಿ ಕೇವಲ 6 ಚೀಲ ಮಾತ್ರ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕರು ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ನಡೆದಿದೆ ಎಂದು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಈ ಪ್ರಕರಣವನ್ನು ಲೋಕಾಯುಕ್ತ ಇಲಾಖೆಗೆ ಒಪ್ಪಿಸಬೇಕು. ನಮ್ಮ ಮೇಲೆ ಅನಗತ್ಯ ಆರೋಪ ಹೊರಿಸುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ನವೀನ್, ನಂದೀಶ್, ಜ್ಯೋತಿ ಇದ್ದರು.