ನಾಡಿನಲ್ಲಿ ಸುತ್ತೂರು ಮಠದ ಸೇವೆ ಅನನ್ಯವಾಗಿದೆ. ನಮ್ಮ ಕುಟುಂಬ ಹಿಂದಿನಿಂದಲೂ ಮಠದೊಂದಿಗೆ ಬಾಂಧವ್ಯ ಹೊಂದಿದೆ.

ಮಳವಳ್ಳಿ: ಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ತಾವು ನಟಿಸಿರುವ ಚಿತ್ರವೊಂದರ ಗೀತೆಗೆ ನೃತ್ಯ ಪ್ರದರ್ಶನ ನೀಡಿ ಭಕ್ತರು, ಸಾರ್ವಜನಿಕರಲ್ಲಿ ಸಂಭ್ರಮವನ್ನು ಹೆಚ್ಚಿಸಿದರು. ಜಯಂತ್ಯುತ್ಸವದ ವೇದಿಕೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಮುತ್ತಣ್ಣ ಚಲನಚಿತ್ರದ ನನ್ನ ತಂಗಿಯ ಮದುವೆ ಜೋರು ಜೋರು.. ಮುತ್ತಣ್ಣ ಪೀಪಿ ಊದುವ ಮುತ್ತಣ್ಣ ಡೋಲು ಬಡಿಯುವ ಹಾಡು ಹಾಡಿ ನೃತ್ಯ ಮಾಡಿ ನೆರೆದಿದ್ದ ಜನರನ್ನು ರಂಜಿಸಿದರು.

ಇದಕ್ಕೂ ಮುನ್ನ ವಿಚಾರ ಲಹರಿ ಕೃತಿ ಬಿಡುಗಡೆಗೊಳಿಸಿ ನಟ ಶಿವರಾಜ್‌ ಕುಮಾರ್‌ ಮಾತನಾಡಿ, ನಾಡಿನಲ್ಲಿ ಸುತ್ತೂರು ಮಠದ ಸೇವೆ ಅನನ್ಯವಾಗಿದೆ. ನಮ್ಮ ಕುಟುಂಬ ಹಿಂದಿನಿಂದಲೂ ಮಠದೊಂದಿಗೆ ಬಾಂಧವ್ಯ ಹೊಂದಿದೆ ಎಂದು ಸ್ಮರಿಸಿದರು.

ನಮ್ಮ ಅಪ್ಪಾಜಿ, ಅಮ್ಮ ಪ್ರಾರಂಭಿಸಿದ್ದ ಶಕ್ತಿಧಾಮಕ್ಕೆ ಹೆಚ್ಚಿನ ಶಕ್ತಿ ತುಂಬಿದವರು ಸುತ್ತೂರು ಮಠದ ಶ್ರೀಗಳು. ಶ್ರೀಗಳು ಮತ್ತು ಮಠದ ಪರಂಪರೆಯ ಬಗ್ಗೆ ಅಪಾರವಾದ ಗೌರವ ನಮ್ಮ ಕುಟುಂಬಕ್ಕಿದೆ ಎಂದು ಹೇಳಿದರು.