ವಿಶ್ವವಿದ್ಯಾಲಯಗಳ ಮುಚ್ಚುವುದಕ್ಕೆ ವಿಪ ಸದಸ್ಯ ಸಂಕನೂರ ವಿರೋಧ

| Published : Feb 18 2025, 12:30 AM IST

ವಿಶ್ವವಿದ್ಯಾಲಯಗಳ ಮುಚ್ಚುವುದಕ್ಕೆ ವಿಪ ಸದಸ್ಯ ಸಂಕನೂರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅವಧಿಯಲ್ಲಿ ಪ್ರಾರಂಭವಾಗಿರುವ ಒಟ್ಟು 11 ವಿಶ್ವವಿದ್ಯಾಲಯಗಳನ್ನು ಮುಚ್ಚಬೇಕೆಂಬ ನಿರ್ಣಯವನ್ನು ಕೈಬಿಟ್ಟು ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಗದಗ: ಬಿಜೆಪಿ ಅವಧಿಯಲ್ಲಿ ಪ್ರಾರಂಭವಾಗಿರುವ ಒಟ್ಟು 11 ವಿಶ್ವವಿದ್ಯಾಲಯಗಳನ್ನು ಮುಚ್ಚಬೇಕೆಂಬ ನಿರ್ಣಯವನ್ನು ಕೈಬಿಟ್ಟು ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ಮಾಡಲು ಡಿಸಿಎಂ ನೇತೃತ್ವದಲ್ಲಿ ರಚನೆಯಾದ ಸಂಪುಟ ಉಪಸಮಿತಿಯು ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರಾರಂಭವಾದ ಒಟ್ಟು 11 ವಿಶ್ವವಿದ್ಯಾಲಯಗಳಲ್ಲಿ ಬೀದರ್ ಹಾಗೂ ರಾಯಚೂರ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ ಕೊಪ್ಪಳ, ಬಾಗಲಕೋಟೆ, ಹಾವೇರಿ, ಹಾಸನ, ಕೊಡಗು, ಚಾಮರಾಜನಗರ, ನೃಪತುಂಗ ವಿಶ್ವವಿದ್ಯಾಲಯ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಹಾಗೂ ಮಂಡ್ಯ ಒಟ್ಟು 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಆತುರದ ನಿರ್ಣಯವನ್ನು ಕೈಕೊಂಡಿರುವುದು ಶಿಕ್ಷಣದ ವಿರೋಧಿ ನೀತಿಯಾಗಿದೆ. ಆರ್ಥಿಕ ಮುಗ್ಗಟ್ಟನ್ನು ನೆಪ ಮಾಡಿಕೊಂಡು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಣಯ ಮಾಡಿರುವದನ್ನು ಖಂಡಿಸಿದ್ದಾರೆ.ಡಾ. ಮನಮೋಹನಸಿಂಗ್ ಅವರು ಪ್ರಧಾನಮಂತ್ರಿ ಇದ್ದಾಗ ರಚನೆ ಮಾಡಿದ ನ್ಯಾಷನಲ್ ನಾಲೆಡ್ಜ್ ಕಮಿಷನ್ ಶಿಫಾರಸ್ಸಿನ ಅಡಿಯಲ್ಲಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಬೇಕು ಎಂಬ ವಿಚಾರದಂತೆ ಕರ್ನಾಟಕದಲ್ಲಿ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿ 11 ವಿಶ್ವವಿದ್ಯಾಲಯಗಳನ್ನು ಸ್ಥಾಪನೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ಈ ಹೊಸ ವಿಶ್ವವಿದ್ಯಾಲಯಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಮಂಡಿಸಿದ ಎರಡು ಬಜೆಟ್‌ಗಳಲ್ಲಿ ಒಂದು ಪೈಸಾ ಅನುದಾನ ನೀಡದೇ ಅನ್ಯಾಯ ಮಾಡಿದ್ದಾರೆ.ಬಿಜೆಪಿ ಸರ್ಕಾರ 2019-20ರಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ) ಅಡಿಯಲ್ಲಿ ಪ್ರಾರಂಭ ಮಾಡಿದ 4 ವಿಶ್ವವಿದ್ಯಾಲಯಗಳಿಗೆ ಹಾಗೂ 2022-23ರಲ್ಲಿ ಪ್ರಾರಂಭ ಮಾಡಿದ 7 ವಿಶ್ವವಿದ್ಯಾಲಯಗಳಿಗೆ ಸುಮಾರು 50ರಿಂದ 100 ಎಕರೆ ಭೂಮಿ ಹಾಗೂ ತನ್ನದೇ ಆದ ಕಟ್ಟಡಗಳನ್ನು ಹೊಂದಿ ಕಳೆದ ಎರಡು-ಮೂರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಹೀಗಿರುವಾಗ ಮುಖ್ಯಮಂತ್ರಿಗಳು ಇವುಗಳನ್ನು ಬೆಳೆಸುವಂತಹ ಕಾರ್ಯ ಮಾಡಬೇಕೆ ವಿನಃ ಕುತ್ತಿಗೆ ಹಿಚುಕುವ ಕೆಟ್ಟ ಕೆಲಸಕ್ಕೆ ಮುಂದಾಗಬಾರದು ಎಂದು ತಿಳಿಸಿದ್ದಾರೆ.