ಸಾರಾಂಶ
ಕೋಟೆಯಲ್ಲಿ ಕೈಲಾಸ ವೈಕುಂಠ ಭಕ್ತಿಗೀತೆ ಸಮರ್ಪಣೆ
ಕನ್ನಡ ಪ್ರಭ ವಾರ್ತೆ, ಚಿಕ್ಕಮಗಳೂರುಸಂಗೀತ ಚಿಕಿತ್ಸೆ ಬಹಳ ಹಿಂದಿನಿಂದಲೂ ಪರಿಣಾಮಕಾರಿಯಾದುದು. ಸಂಗೀತ ಕೇಳುತ್ತಿರುವ ಮನಸ್ಸು ಸಂಯಮದಿಂದ ವರ್ತಿಸುತ್ತದೆ. ಗಾನವೂ ಒಂದು ಧ್ಯಾನ ವಿಧಾನ ಎಂದು ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ.ಮುರಳೀಧರ್ ತಿಳಿಸಿದರು. ನಗರದ ಕಲ್ಕಟ್ಟೆ ಪುಸ್ತಕದಮನೆ, ಸೂರಂಕಣ, ದೀವಿಗೆ ಬಳಗದವರು ಎಚ್.ಎನ್.ಮಲ್ಲೇಶರಾವ್ ಸ್ಮರಣೆಯಲ್ಲಿ ನಡೆಸುತ್ತಿರುವ `ಕಲ್ಕಟ್ಟೆ ಗಾನ ದೀವಿಗೆ'''''''' ಸರಣಿ ೨೦ನೇ ಭಕ್ತಿಗೀತೆಯನ್ನು ಕೋಟೆ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ವೇಗದ ಈ ಆಧುನಿಕ ಕಾಲದಲ್ಲಿ ಒತ್ತಡಗಳು ಹೆಚ್ಚು. ಹಾಡು ಹೇಳುವುದು ಮತ್ತು ಕೇಳುವುದು ಎರಡೂ ನಮಗೆ ತಾಳ್ಮೆ ಕಲಿಸುತ್ತವೆ. ಅದರಲ್ಲೂ ಮುಂಜಾನೆ ಭಕ್ತಿಗೀತೆ ಕೇಳುವುದರಿಂದ ಅದರ ಸಾಹಿತ್ಯ ಮತ್ತು ಸಂಗೀತ ಸಾತ್ವಿಕತೆಗೆ ಪ್ರೇರಣೆ ನೀಡುತ್ತವೆ ಎಂದು ನುಡಿದರು. ಹಿರಿಯ ಕೊಳಲು ವಾದಕ ನಾಗರಾಜ್ ಮಾತನಾಡಿ, ದೇವಸ್ಥಾನಗಳು ಸಾಂಸ್ಕೃತಿಕ ಕೇಂದ್ರಗಳೂ ಹೌದು. ಇಲ್ಲಿ ಮಂತ್ರಾವರಣ ಮಾತ್ರ ಅಲ್ಲ, ಸಂಗೀತದ ಸ್ವರ ಗಾನಾವರಣವೂ ಇರುತ್ತದೆ. ಕಲ್ಕಟ್ಟೆ ದಂಪತಿಗಳೂ ಈ ಸಂದರ್ಭದಲ್ಲಿ ಹೊಸ ಗಾನ ತರಂಗಗಳನ್ನು ಸೇರಿಸುತ್ತಿರುವುದು ಅಭಿನಂದನೀಯ. ಇಲ್ಲಿ ಹಿನ್ನೆಲೆ ಸಂಗೀತ ನೀಡುತ್ತಿರುವ ಮಿತ್ರ ಕೆ.ಎನ್.ನಾಗಭೂಷಣ್ ಅವರ ಶ್ರಮವೂ ಅತ್ಯಂತ ಪ್ರಶಂಸನೀಯ ಎಂದರು. ಎಂ.ಇ.ಎಸ್. ವಿದ್ಯಾಸಂಸ್ಥೆ ಶೈಕ್ಷಣಿಕ ಸಲಹೆಗಾರ ಮಂಜುನಾಥ್ ಭಟ್ ಮಾತನಾಡಿ, ಕಾಲೇಜು ದಿನಗಳಿಂದಲೂ ಕ್ರಿಯಾಶೀಲರಾಗಿರುವ ನಾಗರಾಜರಾವ್ ಅದನ್ನು ಈ ಕಾಲದಲ್ಲಿಯೂ ಮುಂದುವರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಸರ್ವ ಸ್ಫೂರ್ತಿದಾಯಕ ವಿಚಾರ ಎಂದರು. ಸಾಹಿತಿ ರಮೇಶ ಬೊಂಗಾಳೆ ಮಾತನಾಡಿ, ಕಲೆ ಸೃಜನಶೀಲ ಮಾಧ್ಯಮ. ಒಳಿತನ್ನು ನೀಡಲು ಹೊರಟ ಸುಸಂಸ್ಕೃತ ಹಾದಿ ಎಂದು ಹೇಳಿದರು. ಕಾದಂಬರಿಕಾರ ಸಸಿಹಿತ್ಲು ಸುಬ್ರಹ್ಮಣ್ಯ, ಧ್ವನಿಗ್ರಾಹಕ ಕೆ.ಎನ್.ನಾಗಭೂಷಣ್, ಗಾಯಕಿ ಜ್ಯೋತಿ ವಿನೀತ್ ಕುಮಾರ್, ಟೈಲರ್‍ಸ್ ಅಸೋಸಿ ಯೇಶನ್‌ನ ಅಶೋಕ್ ಕುಮಾರ್, ಹಿರಿಯ ನಾಟಿ ವೈದ್ಯೆ ಶಾಂತಾ ಮಲ್ಲೇಶರಾವ್, ಕೋಟೆ ಅಂಚೆಮನೆ ಸುಧಾಕರ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ನಿರ್ದೇಶಕ ಕೆ.ಯು.ವಿನೀತ್‌ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಆಂಬರ್ ವ್ಯಾಲಿ ಶಾಲೆ ಶಿಕ್ಷಕಿ ವಾಸಂತಿ ಪದ್ಮನಾಭ್, ಅನಸೂಯ ಉಪ್ಪಳ್ಳಿ, ಭಾನುಮತಿ, ಹಿರಿಯ ಕಲಾವಿದ ಜಯಂತ ಆಚಾರ್, ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಅರ್ಚಕರಾದ ಶಶಿಕಾಂತ ಭಟ್ ಹಾಗೂ ಉಲಾ ದಂಪತಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಗಾಯಕ ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ನಿರ್ಮಾಪಕಿ ರೇಖಾ ನಾಗರಾಜರಾವ್ ವಂದಿಸಿದರು.