ಅಂಕೋಲಾ: ರೈಲಿನಲ್ಲಿ ಅಂಕೋಲಾದಿಂದ ಮಂಗಳೂರಿಗೆ ಪ್ರಯಾಣಿಸಲು ರೈಲಿನ ಸಮಯದ ಮಾಹಿತಿ ಪಡೆಯಲು ಮೊಬೈಲ್ನ ಲ್ಲಿ ಹುಡುಕಾಟ ನಡೆಸಿದ ಸರ್ಕಾರಿ ನೌಕರರೊಬ್ಬರ ಮೊಬೈಲ್ ಹ್ಯಾಕ್ ಮಾಡಿದ ಸೈಬರ್ ವಂಚಕರು, ಅವರ ತಾಯಿಯ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ₹3 ಲಕ್ಷ ಹಣವನ್ನು ಮೂರು ಕಂತುಗಳಲ್ಲಿ ಎಗರಿಸಿದ ಘಟನೆ ನಡೆದಿದೆ.

ಅಂಕೋಲಾದ ಗಣಪತಿ ಗಲ್ಲಿಯ ನಿವಾಸಿ ಮಂಜುನಾಥ ನವೀನಕುಮಾರ ಅವರು ಹಣ ಕಳೆದುಕೊಂಡವರಾಗಿದ್ದಾರೆ. ಅವರ ತಾಯಿ ತುಳಸಿ ದುರ್ಗಾನಂದ ನಾಯ್ಕ ಅವರ ಹೆಸರಿನಲ್ಲಿ ಕೆನರಾ ಬ್ಯಾಂಕ್ನಲ್ಲಿ ಖಾತೆಯಿದ್ದು, ಅದರಿಂದಲೇ ಹಣ ಕಡಿತವಾಗಿದೆ.

ಅ. 21ರಂದು ಸಂಜೆ 5 ಗಂಟೆಗೆ ಅಂಕೋಲಾದಿಂದ ಮಂಗಳೂರಿಗೆ ತೆರಳುವ ರೈಲಿನ ಸಮಯ ತಿಳಿದುಕೊಳ್ಳಲು ಮಂಜುನಾಥ ಅವರು ಮೊಬೈಲ್ನಲ್ಲಿ ರೈಲ್ವೆ ಆಪ್ ಮೂಲಕ ಮಾಹಿತಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರ ಮೊಬೈಲ್ ಹ್ಯಾಕ್ ಮಾಡಿದ ಸೈಬರ್ ವಂಚಕರು, ಏಕಾಏಕಿ ಒಂದು ಲಕ್ಷ ರು. ಕಡಿತಗೊಂಡಿರುವ ಕುರಿತು ಸಂದೇಶ ಕಳುಹಿಸಿದ್ದಾರೆ. ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಲು ಮುಂದಾದಾಗ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ತಮ್ಮ ಖಾತೆಯಲ್ಲಿದ್ದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.

ನಂತರ ಪರಿಶೀಲಿಸಿದಾಗ ತಮ್ಮ ತಾಯಿ ತುಳಸಿ ನಾಯ್ಕ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವುದು ಬೆಳಕಿಗೆ ಬಂದಿದೆ. ಅಷ್ಟರಲ್ಲಾಗಲೇ ಮತ್ತೆರಡು ಬಾರಿ ತಲಾ ಒಂದು ಲಕ್ಷ ರು.ನಂತೆ ಒಟ್ಟು ಮೂರು ಲಕ್ಷ ರು. ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದರು ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಮಂಜುನಾಥ ಅವರು ತಕ್ಷಣ ಸೈಬರ್ ವಂಚನೆ ತಡೆ ಸಹಾಯವಾಣಿ 1930ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ತಲಾ ಒಂದು ಲಕ್ಷ ರು.ನಂತೆ ಮೂರು ಬಾರಿ ಒಟ್ಟು ಮೂರು ಲಕ್ಷ ರು. ಹಣ ಕಡಿತವಾಗಿರುವ ಕುರಿತು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.


ರೈಲಿನ ಸಮಯ ಹುಡುಕಾಟ, ಖಾತೆಗೆ ಕನ್ನ!

ರೈಲ್ವೆ ಪ್ರಯಾಣದ ಮಾಹಿತಿ ಪಡೆಯಲು ಮೊಬೈಲ್ ನಲ್ಲಿ ನಡೆಸಿದ ಹುಡುಕಾಟವೇ ಸೈಬರ್ ವಂಚನೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕರು ಅಪರಿಚಿತ ಲಿಂಕ್ ಗಳು, ನಕಲಿ ಆ್ಯಪ್ ಗಳು ಹಾಗೂ ವೆಬ್ ಸೈಟ್ ಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.