ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಕೊಣ್ಣೂರ ಗ್ರಾಮದ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ನರಗುಂದ

ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಕೊಣ್ಣೂರ ಗ್ರಾಮದ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದರು.

ತಾಲೂಕಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸರ್ಕಾರ ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ನೀಡದೆ ಅನ್ಯಾಯ ಮಾಡುತ್ತಿದೆ. ರೈತರು 1 ಎಕರೆ ಕಬ್ಬು ಬೆಳೆಯಬೇಕೆಂದರೆ ಕನಿಷ್ಟ ₹30ರಿಂದ 35ಸಾವಿರ ಖರ್ಚು ಮಾಡಬೇಕು. ಹಾಗಾಗಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹5500 ಬೆಲೆ ನಿಗದಿ ಮಾಡದಿದ್ದರೆ ರೈತರು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರ ಮತ್ತು ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಿ ಬೇಗ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರೈತರು ಸರ್ಕಾರ ಮತ್ತಷ್ಟು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ ಕಬ್ಬು ಬೆಳೆಗಾರರ ಮತ್ತು ಮಹದಾಯಿ ಹೋರಾಟಗಾರರು, ಸರ್ವ ಪಕ್ಷ ಸಭೆ ಕರೆದುಕೊಂಡು ಹೋಗಿ ದೆಹಲಿಯಲ್ಲಿ ಈ ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ರೈತರ ಹೋರಾಟ ನಿಲ್ಲುವುದಿಲ್ಲವೆಂದು ಹೇಳಿದರು.

ಸ್ತಬ್ಧವಾದ ನರಗುಂದ:

ಕಬ್ಬು ಬೆಳೆಗಾರರ ಕರ್ನಾಟಕ ಬಂದ್‌ ಕರೆ ನಿಮಿತ್ತ ನರಗುಂದದಲ್ಲಿ ಬೆಳಗಿನಿಂದ ವಾಹನಗಳ ಸಂಚಾರ ಬಂದಾಗಿದ್ದರಿಂದ ಪ್ರಯಾಣಕರು ದೂರದ ಊರುಗಳಗೆ ಹೋಗಲು ಪರದಾಡಬೇಕಾಯಿತು. ಇನ್ನು ಈ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿವಸ ಅಂತರ್‌ರಾಜ್ಯಗಳಗೆ ಓಡಾಡುವ ಲಾರಿಗಳು ಬಂದ್‌ ಕರೆ ನಿಮಿತ್ತ ಪಟ್ಟಣದ ಹೊರವಲಯದಲ್ಲಿ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

ಈ ಸಂದರ್ಭ ಬಾಬು ಹಿರೇಹೊಳಿ, ಶಂಕರಗೌಡ ಶಿರಿಯಪ್ಪಗೌಡ್ರ, ಮಲ್ಲಪ್ಪ ಮೇಟಿ, ಶಿವಾನಂದ ತೆಗ್ಗಿನಮನಿ, ಸಂತೋಷ ಹಿರೇಗೌಡರ, ಕುಮಾರಸ್ವಾಮಿ ಹಿರೇಮಠ ಹಾಗೂ ಬಾಣದ, ಬೇಳ್ಳೇರಿ, ವಾಸನ, ಕಪ್ಪಲಿ, ಕಲ್ಲಾಪೂರ, ಮೆಣಸಗಿ, ಶಿರೋಳ ಗ್ರಾಮದ ರೈತರು ಇದ್ದರು.