ರೋಣ ಮತಕ್ಷೇತ್ರ ವ್ಯಾಪ್ತಿಯ ಗಜೇಂದ್ರಗಡ ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಹಾಗೂ ಕೆರೆಗಳನ್ನು ಪುನಃಶ್ಚೇತನಗೊಳಿಸುವ ಉದ್ದೇಶದಿಂದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ರೋಣ
ರೋಣ ಮತಕ್ಷೇತ್ರ ವ್ಯಾಪ್ತಿಯ ಗಜೇಂದ್ರಗಡ ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಹಾಗೂ ಕೆರೆಗಳನ್ನು ಪುನಃಶ್ಚೇತನಗೊಳಿಸುವ ಉದ್ದೇಶದಿಂದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ ತಿಳಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗದಗ ಜಿಲ್ಲೆಯ ರೋಣ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ 3 ಕೆರೆಗಳನ್ನು ಕೊಪ್ಪಳ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡಿಸಲಾಗಿದ್ದು, ಉಳಿದ 16 ಕೆರೆಗಳಿಗೆ ಯೋಜನೆಯ ಎರಡನೇ ಹಂತದ ಪ್ಯಾಕೇಜ್-1ರಡಿ ನೀರು ತುಂಬಿಸುವ ಪ್ರಸ್ತಾವನೆ ರೂಪಿಸಲಾಗಿದೆ.
ಯೋಜನೆಯಡಿ ಒಟ್ಟು ಆರು ಎಂ ಐ ಕೆರೆಗಳು ಹಾಗೂ 13 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಸುಮಾರು 0.153 ಟಿಎಂಸಿ ನೀರು ಹರಿಸುವ ಗುರಿ ಹೊಂದಲಾಗಿದೆ. ಇದರಿಂದ ಒಟ್ಟು 153.98 ಎಂಸಿಎಫ್ಟಿ ನೀರು ಸಂಗ್ರಹ ಸಾಮರ್ಥ್ಯ ಕಲ್ಪಿಸುವ ಉದ್ದೇಶವಿದೆ.ಕೆರೆಗಳಿಗೆ ನೀರು ಪೂರೈಸಲು ಒಂದು ಪಂಪ್ಹೌಸ್ ನಿರ್ಮಾಣ, ಎಂಎಸ್ ಮತ್ತು ಎಚ್ಡಿಪಿಇ ಪೈಪ್ಲೈನ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ. ಒಟ್ಟು 34.735 ಕಿ.ಮೀ. ಎಂಎಸ್ ಹಾಗೂ 58.80 ಕಿ.ಮೀ. ಎಚ್ಡಿಪಿಇ ಪೈಪ್ಲೈನ್ ಮೂಲಕ ನೀರು ಪೂರೈಸುವ ಪ್ರಸ್ತಾವನೆಯಿದೆ.
ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ, ಬೆಣಚಮಟ್ಟಿ, ಜಿಗೇರಿ, ನಾಗರಸಿಕೊಪ್ಪ, ಹಾಳಕೇರೆ, ಮ್ಯಾಕಲಜಹರಿ, ವದೇಗೋಳ, ಕಾಗಿಕೊಳ್ಳ ಟ್ಯಾಂಕ್, ಸರ್ಜಾಪೂರ, ಕಳಕಾಪುರ, ಗೋಗೇರಿ, ಕಲ್ಲಿಗನೂರು, ನಿಡಗುಂದಿ, ಕುಂಟೋಜಿ, ಲಕ್ಕಲಕಟ್ಟಿ ಸೇರಿದಂತೆ ಒಟ್ಟು 19 ಕೆರೆಗಳನ್ನು ಯೋಜನೆಗೆ ಪರಿಗಣಿಸಲಾಗಿದೆ.2026ರ ಅಕ್ಟೋಬರ್ 16ರಂದು ನಡೆದ 91ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ₹99.45 ಕೋಟಿ ವೆಚ್ಚದ ಯೋಜನೆಯ ಡಿಪಿಆರ್ ಮಂಡಿಸಲಾಗಿದೆ. 2026-27ನೇ ಸಾಲಿನ ದರಪಟ್ಟಿ ಆಧರಿಸಿ ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತ ಬಳಿಕ ಮುಂದಿನ ಹಂತದ ಕಾಮಗಾರಿಗಳಿಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.
ಯೋಜನೆ ಅನುಷ್ಠಾನಗೊಂಡರೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುವ ಗ್ರಾಮಗಳಿಗೆ ಅನುಕೂಲವಾಗುವುದರ ಜತೆಗೆ ಕೆರೆಗಳ ಪುನಃಶ್ಚೇತನಕ್ಕೂ, ಕೊಳೆಬಾವಿಗಳ ಅಂತರ್ಜಲ ಹೆಚ್ಚಳಕ್ಕೂ ನೆರವಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ಸಭಾಧ್ಯಕ್ಷ ಜಿ.ಎಸ್. ಪಾಟೀಲ ತಿಳಿಸಿದರು.