ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರೀಯ ವಿಪತ್ತಿನ ಕುರಿತು ಜಾಗೃತಿ ಮೂಡಿಸುವುದು, ವಿಪತ್ತು ಸಂಭವಿಸಿದ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಣಕು ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ರೋಟರಿ ಶಾಲೆಯಲ್ಲಿ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಾಂಬ್ ಸ್ಫೋಟ, ಕಟ್ಟಡ ಮತ್ತು ಮನೆಗಳಿಗೆ ಆಕಸ್ಮಿಕ ಬೆಂಕಿ, ಅಪಾಯಕ್ಕೆ ಸಿಲುಕಿದವರ ರಕ್ಷಣೆ, ಪ್ರಥಮ ಚಿಕಿತ್ಸೆ ನೀಡುವುದು, ಬೆಂಕಿ ನಂದಿಸುವ ವಿಧಾನಗಳು, ಬೆಂಕಿಯ ಸ್ವರೂಪಗಳು, ಅದನ್ನು ಆರಿಸಲು ಬಳಸಬಹುದಾದ ಸಾಧನಗಳನ್ನು ಸ್ವತಃ ವಿದ್ಯಾರ್ಥಿಗಳ ಮೂಲಕವೇ ಪ್ರದರ್ಶಿಸಿದರು.
ರೋಟರಿ ಶಾಲೆಯ ಮಕ್ಕಳನ್ನು ವಿವಿಧ ತಂಡಗಳನ್ನಾಗಿ ರಚನೆ ಮಾಡಿ ಬೆಂಕಿ ಬಿದ್ದ ಸಮಯದಲ್ಲಿ ಕಾರ್ಯಾಚರಣೆ ಹೇಗಿರಬೇಕು, ಸಾವುಗಳು ಸಂಭವಿಸದಂತೆ ತಡೆಯುವುದು ಹೇಗೆ, ತುರ್ತಾಗಿ ಅಪಾಯಕ್ಕೆ ಸಿಲುಕಿದವರನ್ನು ಕಟ್ಟಡ ಅಥವಾ ಮನೆಗಳಿಂದ ಹೊರತರುವುದು ಹೇಗೆ, ಪ್ರಥಮ ಚಿಕಿತ್ಸೆಗೆ ದಾಖಲಿಸುವುದು, ಕಟ್ಟಡದಲ್ಲಿರುವವರು, ರಕ್ಷಣೆ ಮಾಡಿದವರನ್ನು ಖಚಿತಪಡಿಸಿಕೊಳ್ಳುವ ಕುರಿತಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ರಾಘವೇಂದ್ರ ವಿವರಣೆ ನೀಡಿದರು.ಮಕ್ಕಳು ಧೈರ್ಯಶಾಲಿಗಳಾಗಿರಬೇಕು. ಬೆಂಕಿ ಅನಾಹುತಗಳು ಸಂಭವಿಸಿದಾಗ ದಿಟ್ಟತನದಿಂದ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಜಾಗೃತಿ, ಅರಿವನ್ನು ಮೂಡಿಸಿಕೊಂಡಿರಬೇಕು. ಬೆಂಕಿಯನ್ನು ನಂದಿಸುವ, ಅಪಾಯದಿಂದ ಪಾರಾಗುವ ತಿಳಿವಳಿಕೆ ಇದ್ದಾಗ ನಿಮ್ಮ ಜೊತೆಗೆ ಇತರರನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಬೆಂಕಿ ಅವಘಡಗಳಲ್ಲಿ ಸಂಭವಿಸಬಹುದಾದ ಹೆಚ್ಚಿನ ಸಾವು-ನೋವುಗಳನ್ನು ತಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಬೆಂಕಿ ಅನಾಹುತಗಳು ಸಂಭವಿಸಿದಾಗ ಒಬ್ಬರಿಂದ ಏನನ್ನೂ ಮಾಡಲಾಗದು. ಅದಕ್ಕಾಗಿ ಎಲ್ಲರೂ ಸಂಘಟಿತರಾಗಿ ಕಾರ್ಯಾಚರಣೆಯಲ್ಲಿ ತೊಡಗಬೇಕು. ನಿಮ್ಮ ಶಾಲೆಯಲ್ಲೂ ಬೆಂಕಿಯನ್ನು ನಂದಿಸುವ ವ್ಯವಸ್ಥೆಯನ್ನು ಮಾಡಿಕೊಂಡಿರುವುದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಇಲಾಖೆಯ ಎರಡು ವಾಹನಗಳ ಮೂಲಕ ಬೆಂಕಿಯನ್ನು ನಂದಿಸುವ, ಆರಿಸಲು ಬಳಸುವ ಸಾಧನಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು. ಆಂಬ್ಯುಲೆನ್ಸ್ ವಾಹನದಲ್ಲಿ ಗಾಯಾಳುಗಳಿಗೆ ನೀಡಲಾಗುವ ಪ್ರಥಮ ಚಿಕಿತ್ಸೆಯ ಬಗ್ಗೆಯೂ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದಲೇ ಗಾಯಾಳುಗಳ ರಕ್ಷಣೆ, ಅಪಾಯಕ್ಕೆ ಸಿಲುಕಿದವರನ್ನು ಹೊರತರುವುದು, ಅವಘಡಗಳು ಉಂಟಾದಾಗ ಏನೆಲ್ಲಾ ಕಾರ್ಯಗಳನ್ನು ಮಾಡಬೇಕೆಂಬ ಬಗ್ಗೆ ಕಾರ್ಯಾಚರಣೆಯಲ್ಲಿ ತೊಡಗಿಸಿ ಅರಿವು ಮೂಡಿಸಲಾಯಿತು.
ರೋಟರಿ ಶಾಲೆಯ ಕಾರ್ಯದರ್ಶಿ ಕೆ.ಪ್ರಭಾಕರ್, ಖಜಾಂಚಿ ಅನಂತರಾಮು, ಬಿ.ಟಿ.ಸಿದ್ದರಾಮಯ್ಯ, ಪ್ರಾಂಶುಪಾಲ ಮೃತ್ಯುಂಜಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.