ಹುಬ್ಬಳ್ಳಿ:

ಆಧುನಿಕತೆ ಎಂಬುದು ಹರಿಯುವ ನೀರಿನಂತೆ, ಅದು ಮನುಷ್ಯ ಬದುಕಿನಲ್ಲಿ ನಾವು ಇಚ್ಛಿಸದೇ ಹೋದರೂ ಎದುರಾಗುತ್ತದೆ, ಮತ್ತೆ ಕೊಚ್ಚಿ ಹೋಗುತ್ತದೆ. ಪುನಃ ಹೊಸದು ಬರುತ್ತದೆ, ಜೀವನದ ಮೌಲ್ಯಗಳು ಅದಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಿರುತ್ತವೆ. ಸಾಹಿತ್ಯ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ರಂಗಕರ್ಮಿ ಡಾ. ಡಿ.ಎಸ್‌. ಚೌಗಲೆ ಹೇಳಿದರು.

ಅಕ್ಷರ ಸಾಹಿತ್ಯ ವೇದಿಕೆ ಮತ್ತು ಕೆಎಂಸಿಆರ್‌ಐ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಕೆಎಂಸಿಆರ್‌ಐನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಮಾಡಿ ಮಾತನಾಡಿದ ಅವರು, ಚಿತ್ರಕಲಾವಿದರು, ಬರಹಗಾರರಾದರೆ ಅವರ ಬರವಣಿಗೆಯಲ್ಲೂ ಚಿತ್ರಕಲೆಯ ವಿಸ್ತಾರ ಕಾಣುತ್ತದೆ. ಎಲ್ಲ ಕಲೆಯ ಮೂಲ ತತ್ವಗಳೂ ಒಂದೇ ಆಗಿರುತ್ತವೆ ಎಂದು ಪ್ರತಿಪಾದಿಸಿದರು.

ತೀರ್ಪಗಾರ ಚನ್ನಪ್ಪ ಅಂಗಡಿ ಮಾತನಾಡಿ, ಕಥಾ ಸ್ಪರ್ಧಾ ವಿಜೇತ ಕಥೆಯು ಸಮಕಾಲೀನ ನಾಗರಿಕ ಬದುಕಿನ ಸಾಂಸ್ಕೃತಿಕ ಪಲ್ಲಟಗಳ ಹಿನ್ನೆಲೆಯಲ್ಲಿ ಗಂಡು- ಹೆಣ್ಣಿನ ಸಂಬಂಧವನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುತ್ತದೆ ಎಂದರು.

ಈ ಬಾರಿಯ ಡಾ. ಪ್ರಹ್ಲಾದ ಅಗಸನಕಟ್ಟೆಕಥಾ ಬಹುಮಾನವನ್ನು ಪಡೆದ ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಸ್ನಾತಕೋತ್ತರ ವಿದ್ಯಾರ್ಥಿನಿ ನಭಾ, ಬಹುಮಾನ ಸ್ವೀಕರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾಂತಪ್ಪ ನಂದೂರ ಮಾತನಾಡಿ, ಕನ್ನಡದ ಕಥೆಗಾರ್ತಿಯರ ಹೊಸ ತಲೆಮಾರು ವಿಭಾನಂಥವರಿಂದ ಮುಂದುವರಿಯುತ್ತಿದೆ ಎಂದು ಹೇಳಿದರು.


ಹರ್ಷವರ್ಧನ ಆಗಸನಕಟ್ಟೆ ತಮ್ಮ ತಂದೆಯ ಕುರಿತು ಅಭಿಪ್ರಾಯ ಹಂಚಿಕೊಂಡರು. ಸುನಂದಾ ಕಡಮೆ ಪ್ರಾಸ್ತಾವಿಕ ಮಾತನಾಡಿದರು. ಕೆಎಂಸಿಆರ್‌ಐ ನಿರ್ದೇಶಕ ಡಾ. ಕೆ.ಎಫ್‌. ಕಮ್ಮಾರ, ವಿಜಯಾ ಅಗಸನಕಟ್ಟೆ, ಸಿ.ಎಂ. ಮುನಿಸ್ವಾಮಿ, ಡಾ. ಭಾರತಿ ಹಿರೇಮಠ, ಗಾಯತ್ರಿ ರವಿ, ಪ್ರಕಾಶ ಕಡಮೆ, ಡಾ. ಎಂ.ಡಿ. ವಕ್ಕುಂದ, ಡಾ. ವಿನಯಾ, ಲಿಂಗರಾಜ ಅಂಗಡಿ, ಬಿ.ಎಸ್‌. ಸೊಪ್ಪಿನ, ವೀರಣ್ಣ ಬಡಿಗೇರ, ಪ್ರೊ. ಕೌಜಲಗಿ, ಗೋವಿಂದ ಹೆಗಡೆ, ಪ್ರದೀಪ ಭಟ್‌ ಸೇರಿದಂತೆ ಹಲವರಿದ್ದರು. ಸಿ.ಎಂ. ಚೆನ್ನಬಸಪ್ಪ, ಡಾ. ಸಿದ್ದೇಶ್ವರ ಕಟಕೋಳ ಪರಿಚಯಿಸಿದರು. ನಿರ್ಮಲಾ ಶೆಟ್ಟರ ಸ್ವಾಗತಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು.