ಹುಬ್ಬಳ್ಳಿ:
ದೇಶದಲ್ಲಿ ಲವ್ ಜಿಹಾದ್, ಮಹಿಳೆಯರ ಮೇಲೆ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳೆಯರು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಶ್ರೀರಾಮಸೇನೆ, ದುರ್ಗಾ ಸೇನೆ ಹುಬ್ಬಳ್ಳಿ-ಧಾರವಾಡ ವತಿಯಿಂದ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ 3000ಕ್ಕೂ ಹೆಚ್ಚು ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ 4000ಕ್ಕೂ ಹೆಚ್ಚು ಮಹಿಳೆಯರು, ಪಾಲಕರು, ಪೋಷಕರು, ಮಹಿಳಾ ಮಂಡಳಗಳ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಹಿಮಾಚಲ ಪ್ರದೇಶದ ಸನಾತನ ಧರ್ಮ ಪ್ರಚಾರಕಿ ಮೀನಾಕ್ಷಿ ಶೇರಾವತ್, ಹಿಂದೂ ಧರ್ಮಕ್ಕೆ ಹೊರಗಿನವರಿಂದ ಅಪಾಯವಿಲ್ಲ, ಧರ್ಮದ ಬಗ್ಗೆ ನಿರ್ಲಕ್ಷ್ಯ ವಹಿಸುವ ನಮ್ಮದೇ ಸಮಾಜದಿಂದ ಅಪಾಯ ಉಂಟಾಗುತ್ತಿದೆ. ತನ್ನ ಧರ್ಮ, ಸಂಸ್ಕೃತಿ ಹಾಗೂ ಇತಿಹಾಸವನ್ನು ಅರಿಯದ ಸಮಾಜವು ಬೇರುಗಳಿಲ್ಲದ ಮರದಂತಾಗುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕಿದೆ ಎಂದರು.ಮಕ್ಕಳಿಗೆ ಬಾಲ್ಯದಿಂದಲೇ ತಮ್ಮ ಧರ್ಮ, ಸಂಸ್ಕೃತಿ, ಇತಿಹಾಸ ಮತ್ತು ಮಹನೀಯರ ತ್ಯಾಗ-ಬಲಿದಾನಗಳ ಬಗ್ಗೆ ತಿಳಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಧರ್ಮದ ಕುರಿತು ಪ್ರಶ್ನೆಗಳು ಹೆಚ್ಚಾಗುತ್ತಿವೆ. ಅಂತಹ ಪ್ರಶ್ನೆಗಳಿಗೆ ಪೋಷಕರು ಸಮರ್ಪಕ ಉತ್ತರ ನೀಡದಿದ್ದರೆ ಬೇರೆ ಪ್ರಭಾವಗಳಿಗೆ ಒಳಗಾಗುವ ಸಾಧ್ಯತೆ ಇದೆ. ಮಕ್ಕಳಿಗೆ ಭಗವದ್ಗೀತೆ, ವೇದಗಳು ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪರಿಚಯಿಸುವ ಕಾರ್ಯವಾಗಲಿದೆ ಎಂದು ಹೇಳಿದರು.
ತಲ್ವಾರ್ ವಿತರಿಸುತ್ತೇವೆ:
ದಿಕ್ಸೂಚಿ ಭಾಷಣ ಮಾಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ಹೆಣ್ಣುಮಕ್ಕಳಿಗೆ ತ್ರಿಶೂಲ ನೀಡುವುದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವುದಕ್ಕಲ್ಲ, ರಕ್ಷಣೆಗಾಗಿ. ಅದನ್ನು ಸದಾ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕೆಣಕಿದವರ ಮೇಲೆ ಆಕ್ರಮಣ ಮಾಡಿ, ಸ್ವಯಂ ರಕ್ಷಣೆ ಮಾಡಿಕೊಳ್ಳಿ ಎಂದು ಕರೆನೀಡಿದರು.
ಇತ್ತೀಚಿನ ದಿನಗಳಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಭಾರತದಲ್ಲಿ ಈ ವರೆಗೆ 10 ಲಕ್ಷ ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಒಳಗಾಗಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ತ್ರಿಶೂಲ ಮಾದರಿಯಲ್ಲೇ ಮಹಿಳೆಯರಿಗೆ ತಲ್ವಾರ್ ವಿತರಿಸುತ್ತೇವೆ. ತಾಕತ್ತು ಇದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.ನಿರ್ಬಂಧ ಹಿಂಪಡೆಯಿರಿ:
ಕನ್ಹೇರಿ ಶ್ರೀಗಳಿಗೆ ಬಸವ ಕಲ್ಯಾಣಕ್ಕೆ ಪ್ರವೇಶ ನಿರ್ಬಂಧ ಹೇರಿರುವುದು ಖಂಡನಾರ್ಹ. ತಕ್ಷಣ ಆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಜೂ. 28ರಂದು ರಾಜ್ಯಾದ್ಯಂತ ಬಸವಕಲ್ಯಾಣ ಚಲೋ ಹಮ್ಮಿಕೊಳ್ಳಲಾಗುವುದು. ರಾಜ್ಯದ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುತಾಲಿಕ್ ಹೇಳಿದರು.ಜಾಗೃತಿ ಹೊಂದಿ:
ಶ್ರೀರಾಮಸೇನೆ ಗೌರವಾಧ್ಯಕ್ಷ ಸತ್ಯಪ್ರಮೋಧೇಂದ್ರ ಸರಸ್ವತಿ ಶ್ರೀ ಮಾತನಾಡಿ, ಸಂಸ್ಕಾರದ ಕೊರತೆಯಿಂದ ಹಿಂದೂ ಯುವತಿಯರ ಬದುಕು ಹಾಳಾಗುತ್ತಿದ್ದು, ತಾಯಂದಿರು ಅರ್ಥ ಮಾಡಿಕೊಳ್ಳಬೇಕು. ಸಂಘಟನೆ ಕೊರತೆ ಹಾಗೂ ನಮ್ಮ ನಡುವಿನ ಒಳಜಗಳದಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಹಿಂದೂ ಸಮಾಜ ಜಾಗೃತಿ ಹೊಂದಬೇಕಿದೆ ಎಂದು ಹೇಳಿದರು.ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯ ಭವ್ಯಾ ಗೌಡ, ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಶ್ರೀಮಾತಾ ಆಶ್ರಮದ ಮಾತಾಜಿ ತೇಜೋಮಯಿ ಮಾತನಾಡಿದರು. ಈ ವೇಳೆ ಕಾಲೇಜು ವಿದ್ಯಾರ್ಥಿನಿಯರಿಗೆ, ಮಹಿಳಾಮಂಡಳದ ಸದಸ್ಯರಿಗೆ ತ್ರಿಶೂಲ ವಿತರಿಸಿ, ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮೋಹನ ಗುರುಸ್ವಾಮಿ, ಎಸ್‌ಎಸ್‌ಕೆ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಜಡಿ, ಮಜೇಥಿಯಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಸೇರಿದಂತೆ ಹಲವರಿದ್ದರು.