ತಾಲೂಕಿನ ಬೂದಗಟ್ಟಿ ಗ್ರಾಮದ ಶ್ರೀಸುರ ಸರಸ್ವತಿ ಗುರುಕುಲ ಜ್ಯೋತಿಷ್ಯಾಲಯ ಇಂದ್ರಪ್ರಸ್ಥ ಆಶ್ರಮದಲ್ಲಿ ಭಾನುವಾರ ತಾಲೂಕಿನ ಪ್ರೌಢಶಾಲೆಗಳ ೩೩ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಹಾವೇರಿ: ತಾಲೂಕಿನ ಬೂದಗಟ್ಟಿ ಗ್ರಾಮದ ಶ್ರೀಸುರ ಸರಸ್ವತಿ ಗುರುಕುಲ ಜ್ಯೋತಿಷ್ಯಾಲಯ ಇಂದ್ರಪ್ರಸ್ಥ ಆಶ್ರಮದಲ್ಲಿ ಭಾನುವಾರ ತಾಲೂಕಿನ ಪ್ರೌಢಶಾಲೆಗಳ ೩೩ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಅಧಿಕ ಮಾಸ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಲಕ್ಷ ಕುಂಕುಮಾರ್ಚನೆ, ಲಕ್ಷ ಪುಷ್ಪಾರ್ಚನೆ, ಸನ್ಮಾನ ಹಾಗೂ ತುಲಾಭಾರ ಎರಡು ದಿನಗಳ ಕಾರ್ಯಕ್ರಮದ ಸಮಾರೋಪ ಸಾನಿಧ್ಯವಹಿಸಿ ಆನಂದವನದ ಶ್ರೀ ಶ್ರೀಧರಮೂರ್ತಿ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ದಾನಗಳಲ್ಲಿ ಅನ್ನದಾನ, ವಿದ್ಯಾದಾನ ಶ್ರೇಷ್ಠ. ಅಧಿಕ ಮಾಸವು ಎಲ್ಲ ಮಾಸಗಳಲ್ಲಿ ಅತ್ಯಂತ ಶ್ರೇಷ, ದಾನ-ಧರ್ಮದಿಂದ ಪುಣ್ಯ ಪ್ರಾಪ್ತಿಯಾಗುವುದು. ೩೩ ಅಡುಗೆ ಭಟ್ಟರ ಹಾಗೂ ೩೩ ಶಿಕ್ಷಕರ ಸನ್ಮಾನ ಮಾಡಿರುವುದು, ಸನ್ಮಾನ ಮಾಡಿರುವ ವೇದಮೂರ್ತಿ ಶ್ರೀನಿವಾಸ ಶಿವಪೂಜಿಯವರ ಸೇವೆ ಕಳೆದ ಐದು ವರ್ಷಗಳಿಂದ ಮಾಡುತ್ತಾ ಬಂದಿರುವುದು ಅವರ ಸೇವಾ ಭಕ್ತಿ ಸಮಾಜ ಮುಖಿ ಕಾರ್ಯಗಳ ಅನುಕರಣೆಯ, ಆದರ್ಶ ಎಂದು ಹೇಳಿದರು. ಪಾಠಶಾಲೆ ಗುರುಗಳಾದ ವೇ. ಶಂಕರ ಭಟ್ ಜೋಶಿ ಮಾತನಾಡಿ, ಮಾಜಿ ಯೋಧರು, ಅನ್ನದಾತರು, ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಗೌರವಿಸುವುದರ ಮೂಲಕ ಶಿವಪುಜಿಯವರು ಸಮಾಜ ಪ್ರೇಮಿಗಳು, ಪರೋಪಕಾರಿಗಳು, ಉತ್ತಮ ಸಂಘಟಕರಾಗಿ ತೆರೆ ಮರೆಯ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದ್ದಾರೆ. ಈ ಬಾರಿ ಶಿಕ್ಷಕರನ್ನು ಗೌರವಿಸಿರುವುದು ಸಂತೋಷವನ್ನುಂಟು ಮಾಡಿದೆ. ವೃತ್ತಿಗಳಲ್ಲಿಯೇ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ, ಸಮಾಜದ ಶಿಲ್ಪಿಗಳು ಶಿಕ್ಷಕರು ಎಂದರು. ಆಶ್ರಮದ ಸಂಸ್ಥಾಪಕರು, ಸಂಘಟಕರು ಆಗಿರುವ ಶ್ರೀನಿವಾಸ ಶಿವಪೂಜಿ ಮಾತನಾಡಿ, ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ, ಮರ ತನ್ನ ನೆರಳನ್ನು ತಾನು ಅನುಭವಿಸುವುದಿಲ್ಲ. ಜೀವನವೆಂದರೆ ನಮಗಾಗಿ ಬದುಕುವುದಲ್ಲ. ಬೇರೆಯವರೇ ಬೇರೆಯವರಿಗಾಗಿಯೂ ಬದುಕಬೇಕು, ಅದುವೇ ಜೀವನ. ಇದಕ್ಕೆಲ್ಲಾ ಪ್ರೇರಣೆ ಶ್ರೀ ಕ್ಷೇತ್ರ ಆನಂದವನದ ಪೂಜ್ಯರ, ಸದ್ಗುರುಗಳ ಕೃಪ ಆಶೀರ್ವಾದವೇ ಕಾರಣ, ನಾನು ನಿಮಿತ್ಯ ಮಾತ್ರ. ಈ ವರ್ಷ ವಿದ್ಯಾ ಗುರುಗಳನ್ನು ಸನ್ಮಾನಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು. ವೇದಬ್ರಹ್ಮ ಶಂಕರ ಭಟ್ ಜೋಶಿ ಗುರುಗಳನ್ನು ಹಾಗೂ ಗುತ್ತಲದ ಚಿದಂಬರ ಕುಲಕರ್ಣಿ ಅವರನ್ನು ನವಧಾನ್ಯಗಳ ಮೂಲಕ ತುಲಾಭಾರ ನೆರವೇರಿಸಿದರು. ಲಕ್ಷ ಕುಂಕುಮಾರ್ಚನೆ ಹಾಗೂ ಲಕ್ಷ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ೪೦೦ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಖ್ಯಾತ ಉದ್ಯಮಿ ಪವನ್ ಬಹದ್ದೂರ ದೇಸಾಯಿ, ಸಹಕಾರಿ ಧುರೀಣ ಡಾ.ಮೃತ್ಯುಂಜಯ ಎಲಿಗಾರ, ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎನ್.ದೊಡ್ಡಗೌಡ್ರ ವೇದಿಕೆಯಲ್ಲಿದ್ದರು.ಶೃತೀಶ್, ರಾಘವೇಂದ್ರ, ರಾಮಚಂದ್ರ ವೇದಘೋಷ ಮಾಡಿದರು. ಶ್ರೀನಿವಾಸ ಸ್ವಾಗತಿಸಿದರು. ಶಿಕ್ಷಕ ಬಾನು ಪ್ರಕಾಶ್ ನಿರೂಪಿಸಿದರು. ಪದ್ಮಾವತಿ ಶ್ರೀನಿವಾಸ್ ವಂದಿಸಿದರು.