ರೈತರ ಹಿತವೇ ನಮ್ಮ ಬದ್ಧತೆ ಎಂದು ಭಾವಿಸಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ತಾಲೂಕಿನ ರೈತರ ಹಿತ ಕಾಯಲು ಹೆಚ್ಚಿನ ಅನುದಾನ ನೀಡಿದ್ದು. ಕ್ಷೇತ್ರದ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಡಿಸಿಎಂ ಡಿಕೆಶಿ ವಿಶೇಷವಾಗಿ 800 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರೈತರ ದೀರ್ಘ ಕಾಲದ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸೂಳೆಕೆರೆ ಜೀರ್ಣೋದ್ಧಾರ, ಒತ್ತುವರಿ ತೆರವು ಹಾಗೂ ನಾಲೆಗಳ ಆಧುನೀಕರಣ ಕಾಮಗಾರಿಗೆ ಜ.18ರಂದು ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಮುಟ್ಟನಹಳ್ಳಿ ಬಳಿ ಇರುವ ಸೂಳೆಕೆರೆ ಬಳಿ ಕಾಮಗಾರಿ ಚಾಲನೆ ನೀಡುವ ಸಂಬಂಧ ಅಧಿಕಾರಿಗಳ ಜತೆಗೂಡಿ ಸ್ಥಳ ಪರಿಶೀಲನೆ ಹಾಗೂ ಕೆರೆ ವೀಕ್ಷಿಸಿದ ನಂತ ಮಾತನಾಡಿದ ಶಾಸಕರು, ಸಿ.ಎಯಹೋಬಳಿಯ ಬಹುತೇಕ ಗ್ರಾಮಗಳ ರೈತರ ಜೀವನಾಡಿ ಸೂಳೆಕೆರೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ರೈತರ ಹಿತವೇ ನಮ್ಮ ಬದ್ಧತೆ ಎಂದು ಭಾವಿಸಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ತಾಲೂಕಿನ ರೈತರ ಹಿತ ಕಾಯಲು ಹೆಚ್ಚಿನ ಅನುದಾನ ನೀಡಿದ್ದು. ಕ್ಷೇತ್ರದ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಡಿಸಿಎಂ ಡಿಕೆಶಿ ವಿಶೇಷವಾಗಿ 800 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.ತಾಲೂಕಿನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಲ ತರುವ ನಿಟ್ಟಿನಲ್ಲಿ ಸೂಳೆಕೆರೆಗೆ ಕಾಯಕಲ್ಪ ಹಾಗೂ ನಾಲೆಗಳ ಆಧುನಿಕರಣಗೊಳಿಸಲು ಮಹತ್ವದ ಯೋಜನೆ ಕಾರ್ಯಗತಗೊಳ್ಳಲಿದೆ. ಸುಮಾರು 34 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ. ಕೆರೆಯ ಒಟ್ಟು ವಿಸ್ತೀರ್ಣ 845 ಎಕರೆ 34 ಗುಂಟೆಯಾಗಿದ್ದು. ಸುಮಾರು 6630 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿದೆ ಎಂದರು.
ಕೆರೆಯಲ್ಲಿ ಹೂಳು ತೆಗೆಯುವಿಕೆ, ಕೆರೆ ಒತ್ತುವರಿ ತೆರವು ಕಾರ್ಯ, ಕಾಲುವೆಗಳ ನಿರ್ಮಾಣ, ಕೆರೆ ಏರಿ ಅಭಿವೃದ್ಧಿ, ಹೆಬ್ಬಾಳ ಹಳ್ಳ ತಡೆಗೋಡೆ (450 ಮೀ.)ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆರೆಯನ್ನು ಸೌಂದರ್ಯೀಕರಣಗೊಳಿಸಲಾಗುವುದು ಎಂದರು.ಸೂಳೆಕೆರೆ ನಾಲಾ ವ್ಯಾಪ್ತಿಯ ನಾಲೆಗಳ ಆಧುನೀಕರಣಕ್ಕಾಗಿ ಸುಮಾರು 47.5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಉತ್ತರ ನಾಲೆಯಲ್ಲಿ 17 ಕಿಮೀ ಒಳಗೊಂಡು ಸುಮಾರು 2605 ಎಕರೆ ಅಚ್ಚುಕಟ್ಟು ಪ್ರದೇಶ ಒಳಗೊಂಡಿದೆ ಎಂದರು.
ಈ ಕಾಮಗಾರಿಯಲ್ಲಿ 123 ಸೇತುವೆ ಮತ್ತು ತೂಬುಗಳ ನಿರ್ಮಾಣ, ದಕ್ಷಿಣ ನಾಲೆಯಲ್ಲಿ ಸುಮಾರು 11.5 ಕಿಮೀ ಉದ್ದ ಹೊಂದಿದ್ದು ಸುಮಾರು 3725 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿದೆ. ಕಾಮಗಾರಿಯಲ್ಲಿ ಸುಮಾರು 60 ಸೇತುವೆಗಳು ಒಳಪಟ್ಟ ತೂಬುಗಳ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಚಂದ್ರಶೇಖರ್, ಸುರೇಶ್, ಮುಟ್ಟನಹಳ್ಳಿ ಮಹೇಂದ್ರ ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.