ವಿದ್ಯಾರ್ಥಿಗಳ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ: ಚನ್ನಾಪುರ ಎನ್.ವೆಂಕಟೇಶಗೌಡ
ಕನ್ನಡಪ್ರಭ ವಾರ್ತೆ ಮುಳಬಾಗಿಲುದೆಹಲಿಯ ಜಂತರ್ ಮಂತರ್‌ನಲ್ಲಿ ನ್ಯಾಯಯುತ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ದೌರ್ಜನ್ಯ ಮಾಡೋ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದೆ ಎಂದು ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಚನ್ನಾಪುರ ಎನ್.ವೆಂಕಟೇಶಗೌಡ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೀಟ್ ಪರೀಕ್ಷೆ ಅಕ್ರಮದ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವಾಗ ಪೊಲೀಸರಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿಸಿ ಹಲ್ಲೆ ನಡೆಸಿ ಲಾಠಿ ಚಾರ್ಜ್ ಮಾಡಿ ಪ್ರತಿಭಟನೆಗೆ ಅಡ್ಡಿಪಡಿಸಿದ್ದಾರೆಂದು ಟೀಕಿಸಿದವರು, ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಅಹಿಂದ ಚಳವಳಿ ರಾಜ್ಯ ಸಂಚಾಲಕ ವಡ್ಡಹಳ್ಳಿ ವೇಣುಗೋಪಾಲ್ ಮಾತನಾಡಿ, ನೀಟ್ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಇದನ್ನು ಖಂಡಿಸಿ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುವಾಗ ಅವರ ಮೇಲೆ ಲಾಠಿ ಚಾರ್ಜ್ ಮಾಡಿ ಪೊಲೀಸರ ಮೂಲಕ ದೌರ್ಜನ್ಯ ನಡೆಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ತಿಳಿಸಿದರು.
ಅಹಿಂದ ಚಳವಳಿ ರಾಜ್ಯ ಸಂಚಾಲಕ ಕಾರ್ಗೀಲ್ ವೆಂಕಟೇಶ್, ರಾಜ್ಯ ಒಬಿಸಿ ಸಂಚಾಲಕ ಅಶೋಕ್ ಕುಮಾರ್, ಜಿಲ್ಲಾ ಸಂಚಾಲಕ ಮಾಲೂರು ವೆಂಕಟಸ್ವಾಮಿ, ದೇವರಾಯ ಸಮುದ್ರರಾಜು, ಶಂಕ್ರಪ್ಪ, ಕುರುಬರ ಸಂಘದ ಅಧ್ಯಕ್ಷ ಟಿ.ಸುಬ್ರಮಣಿ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ, ಮಾರಂಡಹಳ್ಳಿ ಶಂಕರಪ್ಪ, ಗೊಲ್ಲಹಳ್ಳಿ ವೆಂಕಟರೆಡ್ಡಿ, ಮುಜು ಇದ್ದರು.