ರಾಮನಗರ: ಮನುಷ್ಯನಿಗೆ ಧಾರ್ಮಿಕ ಪ್ರಜ್ಞೆ, ಧಾರ್ಮಿಕ ಆಚರಣೆ, ದೇವರಲ್ಲಿ ಶ್ರದ್ಧೆ ಭಕ್ತಿ ಎಲ್ಲಾ ಬಹಳ ಮುಖ್ಯ. ಅವುಗಳನ್ನು ಮನುಷ್ಯನ ಮನಸ್ಸಿನಲ್ಲಿ ಬಿಂಬಿಸತಕ್ಕಂತಹ ದೇವಾಲಯವಾಗಿ ಮಠಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ರೇವಣಸಿದ್ದೇಶ್ವರ ಬೆಟ್ಟವೂ ಒಂದಾಗಿದೆ ಎಂದು ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ಧೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ನಡೆದ ಲಿಂಗೈಕ್ಯ ಬಸವಲಿಂಗರಾಜ ಸ್ವಾಮೀಜಿ ಸಂಸ್ಮರಣೋತ್ಸವ, ನೂತನ ಮಠದ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆದ ಉಚಿತ ಸಾಮೂಹಿಕ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.ರೇವಣಸಿದ್ದೇಶ್ವರ ಬೆಟ್ಟ ಕರ್ನಾಟಕದ ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯುಳ್ಳ ಭಕ್ತರಿರುವ ಪವಿತ್ರವಾದ ಕ್ಷೇತ್ರ. ಸಾವಿರ ವರ್ಷಗಳ ಹಿಂದೆ ಸ್ಥಾಪನೆಯಾದ ರೇವಣಸಿದ್ದೇಶ್ವರ ಬೆಟ್ಟವು, ಭಕ್ತಾದಿಗಳ ಆಶಯವನ್ನು ಈಡೇರಿಸುವ, ಅವರ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಪವಿತ್ರ ಧಾರ್ಮಿಕ ತಾಣವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ಹೆಸರಲ್ಲೇ ಇರುವಂತೆ ಭಕ್ತರಿಗೆ ದಾಸೋಹ ನೀಡುತ್ತಾ ಭಕ್ತರ ದಾಸೋಹ ಮಠವಾಗಿದೆ. ಆ ಪರಂಪರೆ ಉಳಿಸಿಕೊಂಡು ಬಂದಿರುವುದರಿಂದಲೇ ಇಂದು ಉಚಿತ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲು ಸಾಧ್ಯವಾಗಿವೆ ಎಂದು ಶ್ರೀಗಳು ತಿಳಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠ ಒಂದು ಹೊಸ ಕಲ್ಪನೆಯೊಂದಿಗೆ ತನ್ನ ಕಾರ್ಯಕ್ಷೇತ್ರವನ್ನ ತುಂಬಾ ಎತ್ತರಕ್ಕೆ ಕೊಂಡೊಯ್ಯತಕ್ಕಂತ ಕೆಲಸವನ್ನು ಲಿಂಗೈಕ್ಯ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ಈಗಿನ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿದ್ದಾರೆ. ರೇವಣಸಿದ್ದೇಶ್ವರ ಬೆಟ್ಟ ಭಕ್ತರ ಶ್ರದ್ಧೆ ಭಕ್ತಿ ಕೇಂದ್ರ ಬೆಟ್ಟಕ್ಕೆ ತನ್ನದೇ ಆದ ಇತಿಹಾಸವಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವಂತ ಈ ಪ್ರದೇಶದಲ್ಲಿ ಒಳ್ಳೆ ಮಠವನ್ನು ಮಾಡಿ ಜನಜಾಗೃತಿ ಮತ್ತು ಭಾವೈಕ್ಯ ಧರ್ಮ ಸಮಾರಂಭ ನಡೆಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಕೆ.ರಾಜು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೆಆರ್ ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್, ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಹೊನ್ನಮ್ಮ ಗವೀಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ, ಸರಗೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ವೀರಶೈವ ಯುವಕ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಪ್ರಾಧಿಕಾರ ಅಧ್ಯಕ್ಷ ರಾಜಶೇಖರ್ ಮಾತನಾಡಿದರು.
ನೂತನ ವಧೂವರರಿಗೆ ಶುಭ ಹಾರೈಕೆ:
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದ ನೂತನ ಜೋಡಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ್, ತಾಲೂಕು ಅಧ್ಯಕ್ಷ ಎಂ.ಎಸ್. ಶಂಕರಪ್ಪ ಮತ್ತಿತರ ಮುಖಂಡರು ಶುಭ ಹಾರೈಸಿದರು.
ದಾಸೋಹ ಮಠದ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ರಾಜಣ್ಣ, ಟ್ರಸ್ಟ್ ಸದಸ್ಯರಾದ ಬಿಡದಿ ಶಿವಸ್ವಾಮಿ, ನಾಯಂಡಹಳ್ಳಿ ಷಡಕ್ಷರಿ, ಕೋಟಹಳ್ಳಿ ರವಿ, ಮುಖಂಡರಾದ ಎ.ಜೆ.ಸುರೇಶ್, ಐಜೂರು ಎಂ.ಜಗದೀಶ್, ನೆಲಮಲೆ ಗಂಗಾಧರ್, ಪ್ರಶಾಂತ್, ಸ್ವಾಮಿ, ಉಪನ್ಯಾಸಕ ಅರುಣ್, ನಾಗೇಶ್, ಯತೀಶ್, ಮಹದೇವಯ್ಯ, ನಂಜುಂಡಸ್ವಾಮಿ, ನಾಗೇಂದ್ರ, ಗೋಪಾಲನಾಯ್ಕ, ಗುನ್ನೂರು ದೇವರಾಜು, ಅಕ್ಕಮಹಾದೇವಮ್ಮ, ಸರಸ್ವತಮ್ಮ, ಶೋಭಾ, ನಿರಂಜನ್, ಗುರುಲಿಂಗಯ್ಯ, ಶಂಕರಣ್ಣ, ಚಿಕ್ಕವೀರಯ್ಯ ಉಪಸ್ಥಿತರಿದ್ದರು.29ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ಧೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ಲಿಂಗೈಕ್ಯ ಬಸವಲಿಂಗರಾಜ ಸ್ವಾಮೀಜಿ ಸಂಸ್ಮರಣೋತ್ಸವ, ನೂತನ ಮಠದ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು.