ರುದ್ರೇಶ್ ಹೊನ್ನೇನಹಳ್ಳಿಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಅರಣ್ಯ ನಾಶದಿಂದ ನೆಲಮಂಗಲ ತಾಲೂಕಿನಲ್ಲಿ ಬೇಸಿಗೆಗೂ ಮುನ್ನವೇ ತಾಲೂಕಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಇದರಿಂದ ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ಕೋತಿಗಳು ಸೇರಿ ಮತ್ತಿತರ ಕಾಡು ಪ್ರಾಣಿಗಳು ನೀರು, ಆಹಾರ ಸಿಗದೆ ಪರದಾಡುವಂತಾಗಿದೆ.ಒಣಗಿದ ಮರಗಳಲ್ಲಿ ಆಹಾರ ಹುಡುಕಾಟ: ಹಲವು ವರ್ಷಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಿಲ್ಲದ ಕಾರಣ ಕೆರೆ- ಕುಂಟೆಗಳು ಬತ್ತಿಹೋಗಿವೆ. ದಿನೇ ದಿನೇ ಏರುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಮರ- ಗಿಡಗಳು ಒಣಗಿಹೋಗಿವೆ. ಸೋಂಪುರ ಹೋಬಳಿಯ ಶಿವಗಂಗೆಯ ಬೆಟ್ಟದಲ್ಲಿರುವ ಕೋತಿಗಳು ನೀರು, ಆಹಾರಕ್ಕಾಗಿ ಪರಿತಪಿಸುತ್ತಿವೆ. ಬೆಟ್ಟದಲ್ಲಿ ಎಲ್ಲ ಮರ-ಗಿಡಗಳು ಬಿಸಿಲಿನ ತಾಪಮಾನಕ್ಕೆ ಒಣಗಿ ಹೋಗಿದ್ದು, ಅದೇ ಮರಗಳಲ್ಲಿ ಕೋತಿಗಳು ಆಹಾರ ಹುಡುಕುವ ದೃಶ್ಯಗಳು ನೋಡುಗರ ಮನಕಲಕುವಂತಿದೆ.ಕುಡಿಯುವ ನೀರಿಗೆ ಪರದಾಟ: ಶಿವಗಂಗೆ ಬೆಟ್ಟದಲ್ಲಿ ನೂರಾರು ಸಂಖ್ಯೆಯಲ್ಲಿ ಕೋತಿಗಳು ವಾಸವಾಗಿದ್ದು, ಬೆಟ್ಟದಲ್ಲಿ ಎಲ್ಲೂ ನೀರಿನ ಸೌಲಭ್ಯವಿಲ್ಲದೆ ಕೋತಿಗಳು ನೀರಿಗಾಗಿ ಗ್ರಾಮಗಳತ್ತ ಬರುತ್ತಿವೆ. ಪ್ರವಾಸಿ ಕ್ಷೇತ್ರಗಳನ್ನೇ ನಂಬಿ ಬದುಕಿದ್ದ ಕೋತಿಗಳಿಗೆ ಬೆಟ್ಟದಲ್ಲಿ ನೀರು, ಆಹಾರ ಸಿಗುತ್ತಿಲ್ಲ. ಪ್ರತಿನಿತ್ಯ ಬೆಟ್ಟಗಳಿಂದ ಹೊರಬಂದು ರಸ್ತೆಯಲ್ಲಿ ಸಾರ್ವಜನಿಕರು ಏನಾದರೂ ತಿನ್ನಲು ಆಹಾರ ನೀಡುತ್ತಾರೇನೋ ಎಂದು ಗುಂಪು ಗುಂಪಾಗಿ ರಸ್ತೆ ಬದಿಯಲ್ಲಿ ಕಾಯುತ್ತಿವೆ.
ಸಾಯುವ ಸ್ಥಿತಿ: ಬೆಟ್ಟದಲ್ಲಿ ಎಲ್ಲಿಯೂ ಕೋತಿಗಳಿಗೆ ನೀರು, ಆಹಾರ ಸಿಗದ ಕಾರಣ, ಬಿಸಿಲಿನ ಬೇಗೆಯಿಂದ ಕೆಲವು ಕೋತಿಗಳು ಸುಸ್ತಾಗಿದ್ದು, ಸಾಯುವ ಸ್ಥಿತಿಯಲ್ಲಿವೆ. ಆಹಾರಕ್ಕಾಗಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಬ್ಯಾಗ್ ಗಳನ್ನು ಕಿತ್ತುಕೊಂಡು ಹೋಗುವುದಲ್ಲದೆ ಪ್ರವಾಸಿಗರ ಮೇಲೆ ಹಲ್ಲೆಯೂ ಮಾಡುತ್ತಿವೆ.ಹಣ್ಣನ್ನೇ ಬಿಡದ ಸಸಿ ನೆಡುವ ಇಲಾಖೆ : ರಾಜರ ಆಳ್ವಿಕೆಯಲ್ಲಿ ರಸ್ತೆ, ಬೆಟ್ಟಗಳಲ್ಲಿ ಹಣ್ಣಿನ ಮರ ಗಳನ್ನು ನೆಡಿಸುತ್ತಿದ್ದರು. ಪ್ರಾಣಿ- ಪಕ್ಷಿಗಳಿಗೆ ಬೇಸಿಗೆಯಲ್ಲಿ ಆ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆದರೆ ಈಗ ಅರಣ್ಯ ಇಲಾಖೆ ಹಣ್ಣು, ಹೂವು ಬಿಡದ ಮರಗಳನ್ನು ನೆಡುತ್ತಿರುವುದು ಪ್ರಾಣಿಗಳಿಗೆ ಇಂತಹ ಸಮಸ್ಯೆ ಎದುರಾಗಿದೆ.
ಮಾನವೀಯತೆ ಮೆರೆಯಿರಿ: ಕೋತಿಗಳು ಆಹಾರಕ್ಕಾಗಿ ಪ್ರತಿ ನಿತ್ಯ ರಸ್ತೆ ಬಳಿ ಕಾಯುತ್ತಿ ರುವುದನ್ನು ಅರಿತ ಕೆಲ ಸಾರ್ವಜನಿಕರು ಕೋತಿಗಳಿಗೆ ನೀರು, ಆಹಾರ ನೀಡಿ ಮಾನವೀ ಯತೆ ಮೆರೆಯುತ್ತಿದ್ದಾರೆ. ತಾಲೂಕಿನಲ್ಲಿ ಸಮಾಜ ಸೇವಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳಿದ್ದು, ಕಾಡಿನಲ್ಲಿ ವಾಸಿಸುವ ಮೂಕ ಪ್ರಾಣಿ, ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಆಹಾರ ನೀಡಲು ಮುಂದಾಗಬೇಕಾಗಿದೆ.
-ಕೋಟ್-ಅರಣ್ಯ ಇಲಾಖೆಯವರು ಬೆಟ್ಟದ ತುದಿಯವರೆಗೂ ಅಲ್ಲಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ಅಥವಾ ಡ್ರಮ್ ಗಳನ್ನು ಇಟ್ಟು ನೀರಿನ ವ್ಯವಸ್ಥೆ ಮಾಡಿದರೆ ಕೋತಿಗಳು ನಿರಾಯಾಸವಾಗಿ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತವೆ.ಈ ಬಗ್ಗೆ ಅರಣ್ಯ ಇಲಾಖೆ ಕ್ರಮವಹಿಸಬೇಕಿದೆ.ರುದ್ರೇಶ್ ಗೌರಾಪುರ ಪ್ರಾಣಿಪ್ರಿಯ