ಅರಸೀಕೆರೆ: ನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಭಕ್ತಿ ಹಾಗೂ ವೈಭವದಿಂದ ಆಚರಿಸಲಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಹಾಗೂ ಮೆರವಣಿಗೆಗಳು ಗಮನಸೆಳೆದವು.

ನಗರದ ಶ್ಯಾನುಭೋಗರ ಬೀದಿಯ ಶ್ರೀ ಬಸವಣ್ಣನವರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ನಂದಿ ವಿಗ್ರಹಕ್ಕೆ ರುದ್ರಾಭಿಷೇಕ, ಬಿಲ್ವಪತ್ರೆ, ನಾಗದಳ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷ ಅರ್ಚನೆ ಸಲ್ಲಿಸಲಾಯಿತು. ಹಸಿರು ಹಾಗೂ ಬಣ್ಣಬಣ್ಣದ ಹೂವಿನ ಅಲಂಕಾರದಿಂದ ಕಂಗೊಳಿಸಿದ್ದ ನಂದಿ ವಿಗ್ರಹ ಭಕ್ತರ ಮನ ಸೆಳೆಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಮಹಿಳೆಯರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡು ಬಸವಣ್ಣನವರಿಗೆ ಜಯಘೋಷಗಳನ್ನು ಮೊಳಗಿಸಿದರು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿಯೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು.