ಸಾರಾಂಶ
ದಿನಕ್ಕೆ ಕನಿಷ್ಠ ೩೦ ನಿಮಿಷಗಳನ್ನಾದರೂ ಮಕ್ಕಳ ಜೊತೆ ಕಳೆಯಿರಿ ಎಂದು ಮಂಗಳೂರಿನ ಇಸ್ಕಾನ್ ಒಕ್ಕೂಟದ ಮುಖ್ಯಸ್ಥ ಶ್ವೇತಾದ್ವೀಪ ದಾಸ ಹೇಳಿದ್ದಾರೆ.ಆಳ್ವಾಸ್ ಕೃಷಿ ಸಿರಿ ವೇದಿಕೆಯಲ್ಲಿ ಸೋಮವಾರ ನಡೆದ ಆಳ್ವಾಸ್ ಕಿಂಡರ್‌ಗಾರ್ಟನ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ನಿಮ್ಮ ಅಮೂಲ್ಯ ಸಮಯವನ್ನು ನಿಮ್ಮ ಮಕ್ಕಳಿಗಾಗಿ ಮೀಸಲಿಡಿ. ದಿನಕ್ಕೆ ಕನಿಷ್ಠ ೩೦ ನಿಮಿಷಗಳನ್ನಾದರೂ ಮಕ್ಕಳ ಜೊತೆ ಕಳೆಯಿರಿ ಎಂದು ಮಂಗಳೂರಿನ ಇಸ್ಕಾನ್ ಒಕ್ಕೂಟದ ಮುಖ್ಯಸ್ಥ ಶ್ವೇತಾದ್ವೀಪ ದಾಸ ಹೇಳಿದ್ದಾರೆ.ಆಳ್ವಾಸ್ ಕೃಷಿ ಸಿರಿ ವೇದಿಕೆಯಲ್ಲಿ ಸೋಮವಾರ ನಡೆದ ಆಳ್ವಾಸ್ ಕಿಂಡರ್‌ಗಾರ್ಟನ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಸ್ಮಾರ್ಟ್ ಫೋನ್, ಅಲೆಕ್ಸಾ, ಲ್ಯಾಪ್‌ಟಾಪ್‌ಗಿಂತಲೂ ಮುಖ್ಯವಾದದ್ದು ಪೋಷಕರ ಸಮಯ. ಮಕ್ಕಳ ಜೊತೆ ಕುಳಿತು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಮಕ್ಕಳಿಗೂ ಹೊಸ ವಿಷಯಗಳ ಕುರಿತು ತಿಳಿಯುವ ಕುತೂಹಲ ಹೆಚ್ಚುತ್ತದೆ ಎಂದರು.ನಿಮ್ಮ ಕನಸುಗಳನ್ನು ನಿಮ್ಮ ಮಕ್ಕಳ ಮೇಲೆ ಹೇರಬೇಡಿ. ಅವರೇ ಸ್ವಯಂ ಕನಸು ಕಾಣಲಿ ಎಂದು ಸಲಹೆ ನೀಡಿದರು.
ಮಕ್ಕಳ ಪೋಷಣಾ ವಿಧಾನ ಬದಲಾಗುತ್ತಾ ಇರುತ್ತದೆ. ಪ್ರತಿ ಹಂತದಲ್ಲೂ ಯಾವ ವಿಷಯ ಮಕ್ಕಳಿಗೆ ಒಳಿತು -ಕೆಡುಕು ಎಂಬುದನ್ನು ತಿಳಿದುಕೊಳ್ಳಬೇಕು. ನಿರಾಕರಣೆಯನ್ನೂ ಸ್ವೀಕರಿಸುವ ಮನೋಭಾವ ಮಕ್ಕಳಲ್ಲಿ ವೃದ್ಧಿಯಾಗಬೇಕು. ಮಕ್ಕಳೊಂದಿಗೆ ಮಾತೃ ಭಾಷೆಯಲ್ಲೂ ಮಾತನಾಡುವ ಅಭ್ಯಾಸ ಬೆಳಿಸಿದಾಗ ಅವರ ಜ್ಞಾನಶಕ್ತಿ ಹೆಚ್ಚುತ್ತದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಾಲೆಗಳು ಸಣ್ಣ ಬೀಜಗಳನ್ನು ಬಿತ್ತಬಹುದು. ಆದರೆ, ಅದರ ಆರೈಕೆ ಹಾಗೂ ಪೋಷಣೆಯು ಮನೆಯಲ್ಲಿಯೇ ನಡೆಯಬೇಕು. ‘ನಿರಾಕರಣೆ’ಯು ಗೆಲುವಿನ ಭಾಗ ಎಂದು ಅರಿತುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ಮುಖ ನೋಡಿದಾಗ ನಮ್ಮ ಬೇಸರ ದೂರವಾಗುತ್ತದೆ. ಮನೆಯಲ್ಲಿ ಎರಡು ಮಕ್ಕಳನ್ನು ನಿಭಾಯಿಸಲು ನಮಗೆ ಕಷ್ಟವಾಗುತ್ತದೆ. ಆದರೆ ಶಿಕ್ಷಕರು ೪೦ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂದರು.ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಆಳ್ವಾಸ್ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ನಿತೇಶ್ ಕುಮಾರ್, ಮುಖ್ಯ ಶಿಕ್ಷಕಿ ವೀಣಾ ನಾಯಕ್ ಇದ್ದರು.