ಆರ್‌ಟಿಐ ಹೆಸರಿನಲ್ಲಿ ಸರ್ಕಾರಿ ನೌಕರರ ಮೇಲೆ ನೈತಿಕ ಪೊಲೀಸ್‌ ಗಿರಿ: ಆರೋಪ

| Published : Sep 19 2025, 01:01 AM IST

ಆರ್‌ಟಿಐ ಹೆಸರಿನಲ್ಲಿ ಸರ್ಕಾರಿ ನೌಕರರ ಮೇಲೆ ನೈತಿಕ ಪೊಲೀಸ್‌ ಗಿರಿ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಿ ನೌಕರರ ವೈಯಕ್ತಿಕ ತೇಜೋವಧೆ ಖಂಡಿಸಿ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಇಲಾಖೆ ಶಿರಸ್ತೇದಾರ ಸಲೀಂಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಿ ನೌಕರರ ವೈಯಕ್ತಿಕ ತೇಜೋವಧೆ ಖಂಡಿಸಿ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಇಲಾಖೆ ಶಿರಸ್ತೇದಾರ ಸಲೀಂಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ್ರು ಕೊಟ್ರಗೌಡ ಮಾತನಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಿ ನೌಕರರ ವೈಯಕ್ತಿಕ ತೇಜೋವಧೆ, ಮಾನಹಾನಿಯ ಜತೆಗೆ, ದೌರ್ಜನ್ಯ ಮತ್ತು ಕೆಲಸಕ್ಕೆ ಕುಂದುಂಟು ಮಾಡುವ ಆರ್‌ಟಿಐ ಹೆಸರಿನಲ್ಲಿ ತೊಂದರೆ ನೀಡಿ ನೈತಿಕ ಪೊಲೀಸ್‌ ಗಿರಿ ಮಾಡುವವರ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಪ್ರತಿಯೊಂದು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಡುವೆ ಹೆಚ್ಚು ಒತ್ತಡದಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಆರ್‌ಟಿಐ ಕಾರ್ಯಕರ್ತರ, ಯೂಟೂಬ್‌, ವಿವಿಧ ಸಂಘ-ಸಂಸ್ಥೆಗಳ ಹೆಸರಿನಲ್ಲಿ ನಿತ್ಯ ನೌಕರರಿಗೆ ತೊಂದರೆ ನೀಡುತ್ತಿರುವ ಹಿನ್ನೆಲೆ ನೈತಿಕ ಸ್ಥೈರ್ಯ ಕುಸಿದು ಹೋಗಿದೆ. ಕೆಲ ಪಟ್ಟಬದ್ಧ ಹಿತಾಸಕ್ತಿಗಳು ದಾಖಲೆಗಳು ಇಲ್ಲದೇ ಪೂರ್ವಗ್ರಹ ಪೀಡಿತರಾಗಿ, ಬಾಯಿಗೆ ಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೀಯಾಳಿಸುತ್ತಿದ್ದಾರೆ, ಇದರಿಂದ ಸರ್ಕಾರಿ ನೌಕರರ ಗೌರವಕ್ಕೆ ಧಕ್ಕೆ ಬಂದಿದೆ ಎಂದರು.

ಸರ್ಕಾರದ ಸೌಲಭ್ಯ ಅನುಷ್ಠಾನಗೊಳಿಸಿ, ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುವ ನೌಕರರ ಹಿತಾಸಕ್ತಿ ಕಾಯಬೇಕಿದೆ. ಇಲಾಖೆಗಳಲ್ಲಿ ಅಧಿಕಾರಿಗಳು ತಪ್ಪು ಮಾಡಿದಾಗ ಅವರ ಮೇಲೆ ಸಕ್ಷಮ ಪ್ರಾಧಿಕಾರವಿದೆ, ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶಗಳಿವೆ. ಅವುಗಳನ್ನು ಬಿಟ್ಟು ಕೆಲ ವ್ಯಕ್ತಿಗಳು ಬೇಕಾಬಿಟ್ಟಿಯಾಗಿ ಇಲಾಖೆಗಳಿಗೆ ನುಗ್ಗಿ ವೀಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಅಧಿಕಾರ ಮಾನಹಾನಿಯಾಗುತ್ತಿದೆ. ತಾಲೂಕಿನಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆ, ದೌರ್ಜನ್ಯದಂತಹ ಪರಿಸ್ಥಿತಿ ಮುಂದುವರೆದರೇ ಇಡೀ ಸರ್ಕಾರಿ ನೌಕರರು, ಸಾಮೂಹಿಕ ವರ್ಗಾವಣೆ ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಪಂ ಇಒ ಪರಮೇಶ್ವರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ನವೀನ್‌, ಖಜಾನೆ ಅಧಿಕಾರಿ ವಾಗೀಶ, ಬಿಇಒ ಮಹೇಶ ಪೂಜಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ, ಪಿಡಿಒ ಶಶಿಕಲಾ, ನರೇಗಾ ಎಡಿ ವೀರಣ್ಣ ನಾಯ್ಕ ಸೇರಿದಂತೆ ಇತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಸರ್ಕಾರಿ ಅರೆ ಸರ್ಕಾರಿ ನೌಕರರು ಸೇರಿದಂತೆ ಒಟ್ಟಾರೆ 500ಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು.