ಸಾರಾಂಶ
ಪ್ರತಿದಿನ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಸಮಾಜದ ಪ್ರಾಥಮಿಕ ವೈದ್ಯರೆನಿಸಿದ್ದಾರೆ. ಜನರು ಬೆಳಗ್ಗೆ ಏಳುವ ಮೊದಲೇ ನೈರ್ಮಲ್ಯ ಕೆಲಸಗಳಲ್ಲಿ ತೊಡಗಿಕೊಳ್ಳುವ ಅವರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.
- ಚನ್ನಗಿರಿ ಸರ್ಕಾರಿ ಆಸ್ಪತ್ರೆಯಿಂದ ಪೌರಕಾರ್ಮಿಕರಿಗೆ ಆರೋಗ್ಯ ಶಿಬಿರ- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪ್ರತಿದಿನ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಸಮಾಜದ ಪ್ರಾಥಮಿಕ ವೈದ್ಯರೆನಿಸಿದ್ದಾರೆ. ಜನರು ಬೆಳಗ್ಗೆ ಏಳುವ ಮೊದಲೇ ನೈರ್ಮಲ್ಯ ಕೆಲಸಗಳಲ್ಲಿ ತೊಡಗಿಕೊಳ್ಳುವ ಅವರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಹೇಳಿದರು.ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಸೋಮವಾರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪುರಸಭೆ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರಲ್ಲಿ ಕೆಲವರು ತಮ್ಮ ಕೆಲಸದ ಒತ್ತಡಗಳನ್ನು ಮರೆಯುವ ಉದ್ದೇಶದಿಂದ ಮದ್ಯಪಾನ, ಧೂಮಪಾನ, ಗುಟ್ಕಾ, ತಂಬಾಕು ಸೇವನೆ ವ್ಯಸನಿಗಳಾಗಿದ್ದಾರೆ. ಅಂಥವರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರದಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದರು.ಮಾಸ್ಟರ್ ಹೆಲ್ತ್ ಚೆಕ್‌ಅಪ್ ₹1.5 ಲಕ್ಷ:
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಮಾತನಾಡಿ, ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕ ಆರೋಗ್ಯವನ್ನು ರಕ್ಷಿಸುವುದು ನಮ್ಮಗಳ ಕರ್ತವ್ಯವಾಗಿದೆ. ಆದ್ದರಿಂದ ಪುರಸಭೆ ವತಿಯಿಂದ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಜನರಲ್ ಚೆಕ್‌ಅಪ್, ಪೌರಕಾರ್ಮಿಕರ ಸುರಕ್ಷತೆಗಾಗಿ ಹ್ಯಾಂಡ್ ಗ್ಲೌಸ್, ಮಾಸ್ಕ್, ಜರ್ಕಿನ್, ಗಮ್ ಬೂಟ್ ಸೇರಿದಂತೆ ಸುರಕ್ಷತಾ ಪರಿಕರಗಳನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಪೌರಕಾರ್ಮಿಕರ ಸಂಪೂರ್ಣ ಆರೋಗ್ಯ ತಪಾಸಣೆಗಾಗಿ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಲು ಈಗಾಗಲೇ ₹1.5 ಲಕ್ಷವನ್ನು ಕಾಯ್ದಿರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಡಾ.ಚಂದ್ರಪ್ಪ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ವಿಜಯ್, ಹನುಮಂತಪ್ಪ, ಪೌರಕಾರ್ಮಿಕರು ಹಾಜರಿದ್ದರು.
- - - -26ಕೆಸಿಎನ್‌ಜಿ4:ಚನ್ನಗಿರಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಪುರಸಭೆ ಪೌರಕಾರ್ಮಿಕರಿಗೆ ಸೋಮವಾರ ಕಚೇರಿ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.