ಮುನಿರಾಬಾದ್: ದವನದ ಹುಣ್ಣಿಮೆ ಪ್ರಯುಕ್ತ ಗುರುವಾರ 2 ಲಕ್ಷಕ್ಕೂ ಅಧಿಕ ಜನ ಭಕ್ತರು ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಭಾಗ್ಯ ಪಡೆದರು.

ಸಾಮಾನ್ಯವಾಗಿ ಹುಣ್ಣಿಮೆ ದಿನಗಳಲ್ಲಿ ದೇವಸ್ಥಾನಕ್ಕೆ 5ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆಯುತ್ತಿದ್ದರು.ಆದರೆ ಇಂದು ಹನುಮ ಜಯಂತಿ ಇರುವ ಹಿನ್ನೆಲೆ ಬಹುತೇಕ ಭಕ್ತರು ಅಂಜನಾದ್ರಿ ಪರ್ವತ ಹಾಗೂ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ಜಾತ್ರೆಗೆ ತೆರಳಿದ ಪ್ರಯುಕ್ತ ಕೊಂಚ ಭಕ್ತರ ಸಂಖ್ಯೆ ಇಳಿಮುಖವಾಗಿದೆ ಎಂದು ದೇವಸ್ಥಾನ ನಿರ್ವಹಣಾಧಿಕಾರಿ ಪ್ರಕಾಶ ರಾವ್‌ ಪತ್ರಿಕೆಗೆ ತಿಳಿಸಿದ್ದಾರೆ.

ಹುಲಿಗೆಮ್ಮದೇವಿ ದರ್ಶನ ಪಡೆಯಲು ಬೇರೆ ಗ್ರಾಮಗಳಿಂದ ಆಗಮಿಸುವ ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದಿಂದ ಭಕ್ತರಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಮುಕ್ತಾಯ ಹಂತಕ್ಕೆ ತಲುಪಿದ ಮೇಲ್ಸೇತುವೆ ಕಾಮಗಾರಿ


ಹುಲಗಿ ಗ್ರಾಮದಲ್ಲಿ 39 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಇನ್ನೂ 2 ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳಿಂದ ಮಾಹಿತಿ ಲಭಿಸಿದೆ.

ಈ ಸೇತುವೆಯು ಪೂರ್ಣಗೊಂಡರೆ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಜನ ಭಕ್ತರಿಗೆ ರೈಲ್ವೆಗೆ ಗೇಟ್ ಹಾಕಿದಾಗ ಗಂಟೆಗಟ್ಟಲೆ ನಿಲ್ಲುವುದು ತಪ್ಪಲಿದೆ.