ಹಾವೇರಿ: ಕಚೇರಿಗೆ ನೊಂದು ಬಂದವರಿಗೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಅವರ ತೊಂದರೆಯನ್ನು ಬಗೆಹರಿಸಿಕೊಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ನಿವೃತ್ತ ಎಎಸ್‌ಐ ಸುರೇಖಾ ರಾಯ್ಕರ್ ಹೇಳಿದರು.

ನಗರದ ಕೆರಿಮತ್ತಿಹಳ್ಳಿಯ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಏ. 2 ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಮಾಡುತ್ತೇವೆ. ಇದರ ಮುಖ್ಯ ಉದ್ದೇಶ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೌರವ ಸನ್ಮಾನ ನೀಡುವುದಾಗಿದೆ. ಪೊಲೀಸರಿಗೆ ಅವರ ಕರ್ತವ್ಯಪ್ರಜ್ಞೆ ಅರಿವಿಗಿದೆ. ಸಮಾಜವನ್ನು ಹೇಗೆ ಶಾಂತತೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆ ಅವರಲ್ಲಿದೆ. ಇಂದು ಇಲಾಖೆಗೆ ಸಾಕಷ್ಟು ಸೌಲಭ್ಯಗಳಿವೆ, ಮಾಹಿತಿ ತಂತ್ರಜ್ಞಾನವಿದೆ, ಅದನ್ನು ಸದುಪಯೋಗಪಡಿಸಿಕೊಂಡು ಕೆಲಸ ಮಾಡಿ. ಮೊಬೈಲ್ ಎಂಬ ಸಾಧನ ಎಲ್ಲವನ್ನು ಸುಲಭಗೊಳಿಸಿದೆ. ಅದನ್ನು ಸರಿಯಾದ ಬಳಸಿದರೆ ಇಡೀ ಪ್ರಪಂಚವನ್ನೇ ನಾವು ಕಾಣಬಹುದು. ಇದು ಇಲಾಖೆಯ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಲ್.ವೈ. ಶಿರಕೋಳ ವರದಿ ವಾಚನ ನೀಡಿ, ಕರ್ನಾಟಕ ಪೊಲೀಸ್ ಆಕ್ಟ್ ಜಾರಿಯಾದ ನಂತರ ಏ. 2 ಪೊಲೀಸ್ ದ್ವಜ ದಿನಾಚರಣೆ ಮತ್ತು ಅ. 21 ಹುತಾತ್ಮ ದಿನಾಚರಣೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಏ. 2ರ ಪೊಲೀಸ್ ದ್ವಜ ದಿನಾಚರಣೆಯ ಮುಖ್ಯ ಉದ್ದೇಶ ಧ್ವಜಗಳನ್ನು ಮಾರಾಟ ಮಾಡುವ ಮೂಲಕ ನಿವೃತ್ತ ಅಧಿಕಾರಿಗಳಿಗೆ ಒಂದು ಗೌರವ ಸಲ್ಲಿಸುವ ಕಾರ್ಯವಾಗಿದೆ. ಇಂದು ಸಮಾಜದಲ್ಲಿ ವಿವಿಧ ವರ್ಗದವರು ವಿವಿಧ ದಿನಾಚರಣೆಗಳನ್ನು ಆಚರಿಸಿಕೊಳ್ಳುತ್ತಾರೆ, ಆದರೆ ಪೊಲೀಸರಿಗಾಗಿ ಯಾವುದೇ ದಿನಾಚರಣೆಗಳಿಲ್ಲ. ನಾವು ಇನ್ನೊಬ್ಬರಿಗಾಗಿ ನಮ್ಮ ಎರಡು ಕಾರ್ಯಕ್ರಮಗಳನ್ನು ಮಾಡುತ್ತೇವೆ, ಅದು ಒಂದು ನಿವೃತ್ತರಾದವರಿಗೆ, ಮತ್ತೊಂದು ಮಡಿದವರಿಗಾಗಿ ಎಂದರು.

ಪೊಲೀಸ್‌ ಸೇವೆಗಳು ನಕಾರಾತ್ಮಕವಾಗಿ ಪ್ರಾರಂಭವಾಗುತ್ತವೆಯೇ ಹೊರತು ಯಾವುದು ಒಳ್ಳೆಯ ಕೆಲಸದಿಂದ ಪ್ರಾರಂಭವಾಗುವುದಿಲ್ಲ. ಸಮಾಜದಲ್ಲಿ ದಿನನಿತ್ಯ ಜಗಳ, ಅಪಘಾತ, ಕೊಲೆ, ಸುಲಿಗೆ, ಕಳ್ಳತನ ಹೀಗೆ ವಿವಿಧ ಹಂತದ ನಕಾರಾತ್ಮಕಗಳನ್ನು ಶಮನಗೊಳಿಸಲು ಕೆಲಸ ಮಾಡುತ್ತೇವೆ. ನಿತ್ಯ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಮಾಡುತ್ತೇವೆ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು. ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯ ನೀಡಲಾಗುತ್ತದೆ. ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ಪೊಲೀಸ್ ಧ್ವಜ ಮಾರಾಟ ಮಾಡಿ ಬಂದ ₹15.78 ಲಕ್ಷದಲ್ಲಿ ₹50 ಸಾವಿರವನ್ನು ಮರಣೋತ್ತರ ಪರಿಹಾರವಾಗಿ ನೀಡಲಾಗಿದೆ. ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ₹8.96 ಲಕ್ಷ ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್‌ ಆರ್‌ಪಿಐ ಶಂಕರಗೌಡ ಪಾಟೀಲ್ ಅವರು ಪೊಲೀಸ್ ಪಡೆಗಳ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಇದೆ ಸಂದರ್ಭದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಿಗ್ಗಾಂವಿ ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವಿಭಾಗದ ಪೊಲೀಸ್ ಅಧಿಕಾರಿಗಳು ಇದ್ದರು.