ಭಟ್ಕಳದಲ್ಲಿ ಒಂದೇ ದಿನ ತಾಯಿ- ಮಗಳು ಆತ್ಮಹತ್ಯೆ

| Published : Jul 16 2024, 12:31 AM IST

ಸಾರಾಂಶ

ಮೃತರನ್ನು ಗೋರಿಕಲ್ ಮನೆಯ ಕೃಷ್ಣಮ್ಮ ನಾರಾಯಣ ನಾಯ್ಕ (೫೭) ಹಾಗೂ ಆಕೆಯ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ(೩೬) ಎಂದು ಗುರುತಿಸಲಾಗಿದೆ.

ಭಟ್ಕಳ: ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಿಕಲ್ ಮನೆಯಲ್ಲಿ ಒಂದೇ ದಿನ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಗೋರಿಕಲ್ ಮನೆಯ ಕೃಷ್ಣಮ್ಮ ನಾರಾಯಣ ನಾಯ್ಕ (೫೭) ಹಾಗೂ ಆಕೆಯ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ(೩೬) ಎಂದು ಗುರುತಿಸಲಾಗಿದೆ.

ಕೃಷ್ಣಮ್ಮ ಅವರ ಮಗಳು ಮಾದೇವಿ ತಾಯಿಯ ಮನೆಯ ಸಮೀಪದಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸ್ತವ್ಯ ಮಾಡುತ್ತಿದ್ದರು. ಅವರಿಗೆ ಓರ್ವ ಮಗಳು ಹಾಗೂ ಓರ್ವ ಮಗನಿದ್ದಾನೆ. ಸೋಮವಾರ ಮನೆಯಲ್ಲಿದ್ದವರೆಲ್ಲರೂ ಸಂಬಂಧಿಕರ ಮದುವೆಗೆ ಹೋಗಿರುವುದರಿಂದ ಒಬ್ಬಳೇ ಇದ್ದ ಮಾದೇವಿ ನೇಣಿಗೆ ಶರಣಾಗಿದ್ದಾಳೆ. ಮಾದೇವಿ ಮನೆಗೆ ಬಂದ ಕೃಷ್ಣಮ್ಮ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದವಳೇ ಮನೆಗೆ ಬಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಯುವ ಪೂರ್ವದಲ್ಲಿ ಮಾದೇವಿ ನಾಯ್ಕ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನನ್ನ ಶವವನ್ನು ತಾಯಿ ಹಾಗೂ ಸಹೋದರ ನೋಡಬಾರದು ಎಂದು ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಾಯಿ ಮಗಳ ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಮದ್ಯದ ಅಂಗಡಿ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಮುಂಡಗೋಡ: ತಾಲೂಕಿನ ಪಾಳಾ(ರಾಮಾಪುರ) ಕ್ರಾಸ್ ಬಳಿಯ ಎಂಎಸ್ಐಎಲ್ ಮದ್ಯದ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.ಬಾನುವಾರ ರಾತ್ರಿ ಎಂದಿನಂತೆ ಬೀಗ ಹಾಕಿ ತೆರಳಿದ್ದ ಅಂಗಡಿ ವ್ಯವಸ್ಥಾಪಕರು ಸೋಮವಾರ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಕಳ್ಳನೋರ್ವ ಕಳ್ಳತನಕ್ಕೆ ಯತ್ನಿಸಿದ್ದು ಬೆಳಕಿಗೆ ಬಂದಿದೆ. ಕಳ್ಳನ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮದ್ಯದ ಅಂಗಡಿ ವ್ಯವಸ್ಥಾಪಕ ಲಕ್ಷ್ಮಣ ದೇವರಗುಡ್ಡ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.