ಮಗುವಿಗೆ ಅನಾರೋಗ್ಯದಿಂದ ಬೇಸತ್ತ ಅಪ್ಪ ಆತ್ಮಹತ್ಯೆಗೆ ಯತ್ನ

| Published : Jul 16 2024, 12:31 AM IST

ಸಾರಾಂಶ

ತಮ್ಮ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಹೆಚ್ಚಾದ ಹಿನ್ನೆಲೆ ಮಗುವಿನ ತಂದೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆ ಕಟ್ಟಡದ ಮೇಲಿಂದ ಹಾರಲು ಹೋದ ವ್ಯಕ್ತಿಯನ್ನು ಆಸ್ಪತ್ರೆ ಸಿಬ್ಬಂದಿ ಮನವೊಲಿಸಿ ಕಾಪಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಮಗುವಿನ ಆರೋಗ್ಯವು ಸುಧಾರಿಸದೇ ದಿನೇದಿನೆ ಹೆಚ್ಚಾದ ಹಿನ್ನೆಲೆಯಲ್ಲಿ ಬೇಸತ್ತು ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಟ್ಟಡದ ಮೇಲಿನಿಂದ ನೆಗೆದು ಆತ್ಮಹತ್ಯೆಗೆ ಯತ್ನಿಸಿದ ತಂದೆಯನ್ನು ಆಸ್ಪತ್ರೆ ಸಿಬ್ಬಂದಿ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ. ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿ ಎಂಬುವರ ಎರಡು ತಿಂಗಳ ಮಗುವಿನ ಅನಾರೋಗ್ಯವು ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ಬೇಸರದಿಂದ ಆತ್ಮಹತ್ಯೆ ಯತ್ನಿಸಿರುವುದಾಗಿ ಹೇಳಲಾಗಿದೆ. ಮಗುವಿನ ಅನಾರೋಗ್ಯದಿಂದ ತಂದೆ ಮನನೊಂದಿದ್ದು, ಹಾಸನದ ಜಿಲ್ಲಾ ಹಿಮ್ಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಮೇಲೇರಿ ಸಾಯುವ ಪ್ರಯತ್ನ ಮಾಡಿದ್ದಾರೆ. ಕಟ್ಟಡದ ಐದನೇ ಮಹಡಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ ಒಡ್ಡಿದ್ದು, ಮಗುವಿನ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಯತ್ನ ಮಾಡಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.

ಗಂಗಸ್ವಾಮಿಯನ್ನು ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿಸಿ ನಂತರ ಆಸ್ಪತ್ರೆ ಸಿಬ್ಬಂದಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿದ್ದು, ವಿಡಿಯೋ ಸೆರೆ ಹಿಡಿದಿದ್ದಾರೆ.