ಎಸ್.ಎಂ. ಸೈಯದ್
ಗಜೇಂದ್ರಗಡ: ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಥರ್ಡ್ ಐ ಜಾರಿಗೆ ತಂದಿದ್ದು, ಪಟ್ಟಣದಲ್ಲಿ ಥರ್ಡ್ ಐ ಕಣ್ಣಿಗೆ ಮಸಿ ರಾಚಲು ಕೆಲವರು ವಾಹನದ ನೋಂದಣಿ ಸಂಖ್ಯೆ ಮರೆಮಾಚಿದರೆ ಇನ್ನೂ ಕೆಲವರು ಬೈಕ್‌ಗಳ ಹಿಂಬದಿಯ ನಂಬರ್ ಪ್ಲೇಟ್ ತೆಗೆಯುತ್ತಿದ್ದು, ಅಪಘಾತ ಅಥವಾ ಅವಘಡ ವೇಳೆ ವಾಹನ ನೋಂದಣಿ ಸಂಖ್ಯೆ ಪತ್ತೆ ಹೇಗೆ ಎಂಬ ಪ್ರಶ್ನೆಗಳನ್ನು ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ಪಟ್ಟಣಕ್ಕೆ ಪ್ರತಿದಿನ ನೆರೆಯ ತಾಲೂಕಿನ ಅನೇಕ ಗ್ರಾಮಗಳ ನೂರಾರು ವಾಹನಗಳು ಸ್ಥಳೀಯ ರಸ್ತೆ ಸೇರಿ ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾಡುತ್ತವೆ. ಆದರೆ ಸರಾಸರಿ ಹತ್ತು ವಾಹನಗಳಲ್ಲಿ ೧ ವಾಹನದ ನೋಂದಣಿ ಸಂಖ್ಯೆ ಮರೆಮಾಚಿದ್ದು ಹಾಗೂ ಮತ್ತೊಂದು ಬೈಕ್ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡುಬರುತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ವಾಹನ ನೋಂದಣಿ ಸಂಖ್ಯೆ ತಿರುಚುತ್ತಿರುವವ ವಾಹನಗಳತ್ತ ಗಮನ ಹರಿಸುತ್ತಿಲ್ಲ. ಪರಿಣಾಮ ವಾಹನ ನೋಂದಣಿ ಸಂಖ್ಯೆ ತಿರುಚುವ ಕ್ರಿಯೆ ಸಾಂಕ್ರಾಮಿಕದಂತೆ ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.ಸಫಲವಾಗದ ಸುಗಮ ಸಂಚಾರ: ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ, ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಪಟ್ಟಣದ ಹೃದಯ ಭಾಗವಾಗಿರುವ ಕಾಲಕಾಲೇಶ್ವರ ವೃತ್ತ ಸೇರಿ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮುಂಭಾಗ ಹಾಗೂ ಪ್ರಮುಖ ರಸ್ತೆ ಸೇರಿ ಅಂದಾಜು ೧೯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಹೀಗಾಗಿ ಪಟ್ಟಣದ ಪ್ರಮುಖ ವೃತ್ತ, ರಸ್ತೆ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಸೇರುವ ಜನದಟ್ಟನೆ ಮತ್ತು ಉಂಟಾಗುವ ವಾಹನ ದಟ್ಟಣೆಯ ದೃಶ್ಯಗಳನ್ನು ಪೊಲೀಸ್ ಠಾಣೆಯಲ್ಲಿನ ಟಿವಿ ಪರದೆಯಲ್ಲಿ ವೀಕ್ಷಿಸಲಾಗುತ್ತಿದೆ. ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿವಾರಣೆಗೆ ಅಗತ್ಯ ಸಂದೇಶವನ್ನು ಕ್ಷಣಾರ್ಧದಲ್ಲಿ ಪೊಲೀಸ್ ಠಾಣೆಯ ಮೂಲಕ ಕರ್ತವ್ಯದಲ್ಲಿನ ಸಿಬ್ಬಂದಿಗೆ ರವಾನಿಸಿ ಸುಗಮ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳಲು ಸಿಟಿ ಕ್ಯಾಮೆರಾ ದೃಶ್ಯಗಳು ಸಹಕಾರಿಯಾಗಿವೆ. ಆದರೆ ಕಾಲಕಾಲೇಶ್ವರ ವೃತ್ತ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳು ಹಾಗೂ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮ ಪಟ್ಟಣದಲ್ಲಿ ಸುಗಮ ಸಂಚಾರದ ಅರ್ಥ ತಿಳಿಯುತ್ತಿಲ್ಲ ಎಂದು ವಾಹನ ಸವಾರರು ಗೋಳಿಡುತ್ತಿದ್ದಾರೆ.ರಸ್ತೆ ಅತಿಕ್ರಮಣ: ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಯಾವಾಗ ಆರಂಭ ಇರುತ್ತದೆ, ಯಾವಾಗ ಬಂದ್ ಆಗುತ್ತದೆ ಎಂಬುದು ವಾಹನ ಸವಾರರಿಗೆ ತಿಳಿಯದಂತಾಗಿದೆ. ರೋಣ, ಕುಷ್ಟಗಿ, ಬಸ್ ನಿಲ್ದಾಣ ಸೇರಿ ಜೋಡು ರಸ್ತೆಯಲ್ಲಿನ ಪಾದಚಾರಿಗಳ ರಸ್ತೆಯನ್ನು ಮನಸೋ ಇಚ್ಛೆ ಅಂಗಡಿಕಾರರು ಅತಿಕ್ರಮಣ ಮಾಡಿದ್ದು, ಪಾದಚಾರಿಗಳ ರಸ್ತೆ ಮಾಯವಾಗಿದೆ.
ಪಟ್ಟಣದ ಪ್ರಮುಖ ವೃತ್ತಗಳಲ್ಲಿಯೇ ಅಡ್ಡಾದಿಡ್ಡಿ ವಾಹನ ನಿಲುಗಡೆ ಹಾಗೂ ವಾಣಿಜ್ಯ ಮಳಿಗೆಗಳ ಕಚ್ಚಾವಸ್ತುಗಳು ಫುಟ್‌ಪಾತ್ ಮೇಲೆ ಹಾಕುವ ಪರಿಣಾಮ ಪಟ್ಟಣದ ಪ್ರಮುಖ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿದೆ. ತುರ್ತು ವೈದ್ಯಕೀಯ ಸೇರಿ ಅಗತ್ಯ ಕೆಲಸಗಳಿಗೆ ತೆರಳುವ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವಾಹನ ನೋಂದಣಿ ತಿದ್ದುಪಡಿ ಮಾಡಿದ ವಾಹನ ಮಾಲೀಕರ ಮೇಲೆ ಕ್ರಮಕ್ಕೆ ಮುಂದಾಗಬೇಕು. ಅಲ್ಲದೆ ಅಪ್ರಾಪ್ತ ಯುವಕರ ಕರ್ಕಶ ಶಬ್ದದೊಂದಿಗೆ ವೇಗವಾಗಿ ಹಾಗೂ ತ್ರಿಬಲ್ ರೈಡಿಂಗ್ ವಾಹನ ಚಾಲನೆಗೆ ನಿರ್ಬಂಧ ಹೇರಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಆಡಳಿತ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪಟ್ಟಣದಲ್ಲಿ ಕೆಲವರು ಬೈಕ್ ಗಳ ನೋಂದಣಿ ಸಂಖ್ಯೆ ತಿರುಚುವುದು ಹಾಗೂ ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಆಗುವ ತಪ್ಪುಗಳ ಬಗ್ಗೆ ಜಾಗೃತಿ ಜತೆಗೆ ಅಂತಹ ವಾಹನಗಳ ಮಾಲೀಕರ ಮೇಲೆ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು. ಅಲ್ಲದೆ ಸಂಚಾರ ನಿಯಮಗಳ ಪಾಲನೆ ವಿಷಯದಲ್ಲಿ ಪೊಲೀಸರು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ರಾಜಕೀಯ ವ್ಯಕ್ತಿಗಳು ಹಾಗೂ ಪ್ರತಿಯೊಬ್ಬರೂ ಪೊಲೀಸರಿಗೆ ಸಹಕರಿಸಬೇಕು ಎಂದು ಗಜೇಂದ್ರಗಡ ವಕೀಲ ಎಂ.ಎಸ್. ಹಡಪದ ಹೇಳಿದರು.