ಸಂಡೂರು: ತಾಲೂಕಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಯ ಕುಮಾರಸ್ವಾಮಿ ಗಣಿಯ ಎಲ್ಲ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕಾರ್ಮಿಕರು ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ದೋಣಿಮಲೈನಲ್ಲಿರುವ ಎನ್‌ಎಂಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯಾಧ್ಯಕ್ಷ ಎ.ದೇವದಾಸ್ ಮಾತನಾಡಿ, ಎನ್‌ಎಂಡಿಸಿ ಕುಮಾರಸ್ವಾಮಿ ಗಣಿಯಲ್ಲಿ ನೂರಾರು ಗುತ್ತಿಗೆ ಕಾರ್ಮಿಕರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಗಣಿಯ ಗುತ್ತಿಗೆ ಪಡೆದಿದ್ದ ರಾಕ್‌ಟೆಕ್ ಕಂಪನಿಯ ಗುತ್ತಿಗೆ ಅವಧಿ ೨೦೨೬ರ ಮಾ.೩೧ಕ್ಕೆ ಮುಕ್ತಾಯವಾಗಿದೆ. ಇದೀಗ ವಿಘ್ನೇಶ್ ಇನ್ಫ್ರಾಪ್ರಾಜೆಕ್ಟ್‌ಗೆ ಹೊಸದಾಗಿ ಟೆಂಡರ್ ನೀಡಲಾಗಿದೆ. ೫೦೦ಕ್ಕೂ ಹೆಚ್ಚು ಕಾರ್ಮಿಕರು ಗಣಿಯಲ್ಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದು, ಇದೀಗ ಇವರ ಬದುಕು ಅತಂತ್ರವಾಗಿದೆ. ಗಣಿಯ ಮೂಲ ಮಾಲೀಕರಾದ ಎನ್‌ಎಂಡಿಸಿ ಹಾಗೂ ಹೊಸ ಕಾಂಟ್ರಾಕ್ಟ್ ವಿಘ್ನೇಶ್ ಕಂಪನಿ ಎಲ್ಲ ಕಾರ್ಮಿಕರನ್ನು ಮುಂದುವರೆಸುವ ಕುರಿತು ಭರವಸೆ ನೀಡಿದ್ದರೂ ಇಲ್ಲಿವರೆಗೆ ಯಾವುದೇ ಸ್ಪಷ್ಟ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಈ ಹಿಂದೆ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಎನ್‌ಎಂಡಿಸಿ ಹಾಗೂ ವಿಘ್ನೇಶ್ ಕಂಪನಿಗೆ ಮನವಿ ಕಳುಹಿಸಿಕೊಡಲಾಗಿದೆ. ಆದರೂ, ಸಮಸ್ಯೆ ಇತ್ಯರ್ಥಕ್ಕೆ ಇಲ್ಲಿವರೆಗೆ ಯಾವುದೇ ಚರ್ಚೆಗೆ ಆಹ್ವಾನಿಸಿಲ್ಲ. ಈ ಹಿಂದೆ ಕೆಲಸದಲ್ಲಿ ಇರದ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಸುದ್ದಿ ಹರಿದಾಡುತ್ತಿರುವುದು ಕಾರ್ಮಿಕರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಹೊಸ ಗುತ್ತಿಗೆದಾರರು ಕೂಡಲೇ ಗಣಿಯಲ್ಲಿ ಈಗಾಗಲೇ ಕೆಲಸ ಮಾಡಿದ ಎಲ್ಲ ಕಾರ್ಮಿಕರನ್ನು ಮೊದಲ ಆದ್ಯತೆ ಮೇರೆಗೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಒಂದು ವೇಳೆ ಇದು ಆಗದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಕಾರ್ಮಿಕರು ಸಜ್ಜಾಗಬೇಕೆಂದು ಕರೆ ನೀಡಿದರು.

ಸಂಯುಕ್ತ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎನ್. ಪ್ರಮೋದ್ ಮಾತನಾಡಿ, ಕಾರ್ಮಿಕರ ತಮ್ಮ ಶ್ರಮದಿಂದ ಎನ್‌ಎಂಡಿಸಿ ಅಂತಹ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಎನ್‌ಎಂಡಿಸಿ ಕೂಡಾ ನಿರಂತರವಾಗಿ ಇದೇ ಕಾರ್ಮಿಕರನ್ನು ಮುಂದುವರೆಸಿಕೊಂಡು ಬಂದಿದೆ. ಈಗಲೂ ಇದೇ ಪದ್ಧತಿಯನ್ನು ಎನ್‌ಎಂಡಿಸಿ ಮುಂದುವರೆಸಬೇಕು. ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಬೇಕಾದರೆ, ಒಗ್ಗಟ್ಟು ಕಾಪಾಡಿಕೊಳ್ಳಬೇಕು ಎಂದರು.

ಪ್ರತಿಭಟನಾಕಾರರು ತಮ್ಮ ಬೇಡಿಕೆಯ ಮನವಿಯನ್ನು ಎನ್‌ಎಂಡಿಸಿ ಡಿಜಿಎಂ (ಎಚ್.ಆರ್) ವೇಲು ವಸಂತನ್ ಅವರಿಗೆ ಸಲ್ಲಿಸಿದರು. ವೇಲು ವಸಂತನ್ ಮನವಿ ಸ್ವೀಕರಿಸಿ, ಏ.೨೦ರಂದು ಎನ್‌ಎಂಡಿಸಿ ಕಾಂಟ್ರಾಕ್ಟರ್ ಹಾಗೂ ಯೂನಿಯನ್ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುವುದು. ಕೂಡಲೇ ರಾಕ್‌ಟೆಕ್ ಕಂಪನಿ ಅಡಿಯಲ್ಲಿ ಕೆಲಸ ಮಾಡಿದ ಎಲ್ಲ ೫೦೦ ಕಾರ್ಮಿಕರ ಪಟ್ಟಿಯನ್ನು ಅಗತ್ಯ ಮಾಹಿತಿಗಳೊಂದಿಗೆ ನೀಡಲು ಕಾರ್ಮಿಕ ಸಂಘಟನೆಯ ಮುಖಂಡರಿಗೆ ತಿಳಿಸಿದರು.


ಎಐಯುಟಿಯುಸಿ ಮುಖಂಡರಾದ ಸುರೇಶ್, ಕಿರಣ್‌ಕುಮಾರ್, ಸಂಯುಕ್ತ ಗಣಿ ಕಾರ್ಮಿಕ ಸಂಘದ ಮುಖಂಡರಾದ ಅಂಬರೀಶ್, ಬಾಲು, ಕೃಷ್ನಪ್ಪ, ತಿಮ್ಮಣ್ಣ, ಬಸವರಾಜ್, ಅಮೀನುದ್ದೀನ್, ಅಯೂಬ್, ಚಿದಾನಂದ, ಪರಶುರಾಮ ಮುಂತಾದವರು ಉಪಸ್ಥಿತರಿದ್ದರು.