ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತುಗಳ ಮಾರಾಟ ಮತ್ತು ವ್ಯವಸನದ ಪಿಡುಗು ದೇಶದ ಅನೇಕ ಯುವ ಸಮುದಾಯದ ಭವಿಷ್ಯವನ್ನೇ ನಾಶಮಾಡುತ್ತಿದ್ದು, ಇದರ ವಿರುದ್ಧ ಸರ್ಕಾರ, ಪೋಷಕರು ಮತ್ತು ಸಾರ್ವಜನಿಕರು ಒಗ್ಗೂಡಿ ರಾಷ್ಟ್ರವ್ಯಾಪಿ ಬೃಹತ್‌ ಆಂದೋಲನ ರೂಪಿಸುವುದು ಅಗತ್ಯವಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಪ್ರತಿಪಾದಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) 31ನೇ ಸಂಸ್ಥಾಪನಾ ದಿನಾಚರಣೆ ಮತ್ತು ‘ನಶಾ ಮುಕ್ತ ಭಾರತ ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ದ್ರವ್ಯ ಸೇವನೆಯು ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಶೈಕ್ಷಣಿಕ ಸಾಧನೆ, ಸಾಮಾಜಿಕ ಒಗ್ಗಟ್ಟು ಮತ್ತು ರಾಷ್ಟ್ರೀಯ ಅಭಿವೃದ್ಧಿಗೂ ಮಾರಕವಾವಾಗಿದೆ. ಮಾದಕ ವಸ್ತುಗಳು ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ, ಒಬ್ಬ ವ್ಯಕ್ತಿಯು ತನ್ನ ಸ್ವಂತ ಜೀವನದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಭಾರತವನ್ನು ನಶಾ ಮುಕ್ತ ದೇಶವಾಗಿಸಲು ಮಾದಕ ವಸ್ತುಗಳ ಮಾರಾಟ ಜಾಲವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದರು.

ಈಗಾಗಲೇ ವ್ಯಸನಕ್ಕೆ ತುತ್ತಾಗಿರುವವರನ್ನು ಬಿಡಿಸಲು ಪುನರ್ವಸತಿ ಕೇಂದ್ರಗಳು ಪರಿಣಾಮಕಾರಿಯಾಗಿ ಕೆಲಸ ನಡೆಯಬೇಕು. ಹೊಸಬರು ವ್ಯಸನಕ್ಕೆ ಉತ್ತಾಗದಂತೆ ನೋಡಿಕೊಳ್ಳಲು ದೇಶಾದ್ಯಂತ ಬೃಹತ್‌ ಜಾಗೃತಿ ಆಂದೋಲನ ನಡೆಯಬೇಕು. ಇದು ಕೇವಲ ಒಂದು ದಿನ, ತಿಂಗಳಿಗೆ ಸೀಮಿತ ಆಗಬಾರದು. ಪ್ರತಿಯೊಬ್ಬರಲ್ಲೂ ಸಾಮಾಜಿಕ ಕಳಕಳಿಯ ರೀತಿ ವರ್ಷಪೂರ್ತಿ ನಡೆಯಬೇಕು. ಇದರಲ್ಲಿ ಸರ್ಕಾರಗಳು ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಆರೋಗ್ಯ ವೃತ್ತಿಪರರು, ಸಂಘ ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ನಾಗರಿಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.ಇಂತಹ ಒಂದು ಅಭಿಯಾನವನ್ನು ವರ್ಷಪೂರ್ತಿ ಯಶಸ್ವಿಯಾಗಿ ನಡೆಸಿದ ಆರೋಗ್ಯ ವಿವಿಯ ಕಾರ್ಯವನ್ನು ಉಪರಾಷ್ಟ್ರಪತಿ ಅವರು ಶ್ಲಾಘಿಸಿದರು. ಇದೇ ವೇಳೆ ವೇದಿಕೆಯಲ್ಲೇ ಕೆಲವು ಮಕ್ಕಳಿಗೆ ಪೋಲಿಯೊ ಲಸಿಕೆ ಹನಿಗಳನ್ನು ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ನಶಾಮುಕ್ತ ಭಾರತದ ಪ್ರತಿಜ್ಞೆ ಸ್ವೀಕರಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಆರೋಗ್ಯ ಸಚಿವ ಯು.ಟಿ. ಖಾದರ್, ಕುಲಪತಿ ಡಾ.ಭಗವಾನ್‌ ಮತ್ತಿತರ ಗಣ್ಯರು ಇದ್ದರು.