ದಾವಣಗೆರೆಯಲ್ಲಿ ಜಿಲ್ಲಾಮಟ್ಟದ ಪಲ್ಸ್ ಪೋಲಿಯೋ ವಿಶೇಷ ಅಭಿಯಾನವನ್ನು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಗುವಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ವಿಶೇಷ ಅಭಿಯಾನದಲ್ಲಿ ಯಾವುದೇ ಒಂದು ಮಗುವೂ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಸೂಚಿಸಿದರು.ಭಾನುವಾರ ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ತಿಂಗಳ ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಜಿಲ್ಲಾಮಟ್ಟದ ಪಲ್ಸ್ ಪೋಲಿಯೊ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಎಲ್ಲ ಭಾಗಗಳ ಅರ್ಹ ಮಕ್ಕಳಿಗೂ ಲಸಿಕೆ ತಲುಪಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಷಣ್ಮುಖಪ್ಪ ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೊ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಇವುಗಳಲ್ಲಿ ಗುರುತಿಸಲಾಗಿರುವ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.ಅಭಿಯಾನ ಯಶಸ್ವಿಗಾಗಿ ಜಿಲ್ಲಾದ್ಯಂತ 1,090 ಲಸಿಕಾ ಬೂತ್‌ಳನ್ನು ಸ್ಥಾಪಿಸಲಾಗಿದೆ. ಬೂತ್‌ಗಳಲ್ಲಿ ಲಸಿಕೆ ಹಾಕುವುದರ ಜೊತೆಗೆ, ಜೂನ್ 29 ರಿಂದ ಜುಲೈ 1 ರವರೆಗೆ ಒಟ್ಟು 3 ದಿನಗಳ ಕಾಲ ಜಿಲ್ಲೆಯ ಎಲ್ಲ ಮನೆ ಮನೆಗೆ ತೆರಳಿ 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮವನ್ನು 2 ಹಂತಗಳಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಸಿಕಾ ಅಭಿಯಾನದ ಯಶಸ್ಸಿಗಾಗಿ ಮನೆ ಮನೆ ಭೇಟಿ ತಂಡ, ಟ್ರಾನ್ಸಿಸ್ಟ್ (ಸಾರಿಗೆ ನಿಲ್ದಾಣಗಳ ತಂಡ) ಮತ್ತು ಸಂಚಾರಿ (ಮೊಬೈಲ್) ತಂಡ ಹೀಗೆ ಮೂರು ಪ್ರಮುಖ ವಿಭಾಗಗಳ ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಹರವಿಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿದಂತೆ ಒಂದೂ ಮಗುವು ಲಸಿಕೆಯಿಂದ ವಂಚಿತವಾಗದಂತೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ತಿಳಿಸಿದರು.ಪಲ್ಸ್ ಪೋಲಿಯೊ ನೊಡೆಲ್ ಅಧಿಕಾರಿ ಡಾ.ಚಂದ್ರಶೇಖರ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಪೋಲಿಯೊ ಮುಕ್ತ ಭಾರತ
ಆರ್.ಸಿ.ಎಚ್.ಒ. ಡಾ. ರೇಣುಕಾರಾಧ್ಯ ಮಾತನಾಡಿ, ಭಾರತವನ್ನು ಪೋಲಿಯೊ ಮುಕ್ತ ದೇಶವನ್ನಾಗಿಸಲಾಗಿದೆ. ಆದರೆ, ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೊ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರೀಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ವೈರಸ್ ಮತ್ತೆ ಇಲ್ಲಿ ಹರಡಬಾರದು ಎಂಬ ಮುಂದಾಲೋಚನೆಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಈ ಪಲ್ಸ್ ಪೋಲಿಯೊ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.