- ಶಿಕ್ಷಣ, ಉದ್ಯೋಗ ಅನ್ಯಾಯ ವಿರುದ್ಧ ಯುವಜನತೆ ಧ್ವನಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ಪರ್ಧಾತ್ಮಕ ಪರೀಕ್ಷೆ, ಉನ್ನತ ಶಿಕ್ಷಣದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ 2 ವರ್ಷದಿಂದ ಹೋರಾಟ ನಡೆಸಿದ್ದೆವು. ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ತಮಗಾದ ಅನ್ಯಾಯದ ವಿರುದ್ಧ ಯುವಜನತೆ ಧ್ವನಿ ಎತ್ತುತ್ತಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 2-3 ತಿಂಗಳಿನಿಂದ ಸಿಜೆಪಿ ಪ್ರತಿಭಟನೆ ನಡೆಸಿತ್ತು. 2 ವರ್ಷದಿಂದ ಸಂಸತ್ತಿನಲ್ಲಿ ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಏನೇ ವಿಷಯ ಮಾತನಾಡುವುದಕ್ಕೂ ಅವಕಾಶವನ್ನೇ ನೀಡುತ್ತಿರಲಿಲ್ಲ. ಸದನದ ಒಳಗೆ, ಹೊರಗೂ ಮಾತನಾಡಲು ಅವಕಾಶ ಇಲ್ಲ ಎಂದರು.

ಸದನದಲ್ಲಿ ಮಸೂದೆಯನ್ನು ಯಾವ ರೀತಿ ಚರ್ಚೆಗೆ ತರುತ್ತಾರೆಂದು ನೀವೂ ನೋಡಿರಬಹುದು. ಶಿಕ್ಷಣ ವ್ಯವಸ್ಥೆ, ಪರೀಕ್ಷೆಯಲ್ಲಿ ಪಾರದರ್ಶಕತೆ ಬಗ್ಗೆ ಚರ್ಚೆ ಶುರುವಾಯಿತು. ಆಗ ಇಡೀ ದೇಶದ ಯುವಜನರು ದೆಹಲಿಗೆ ಬಂದರು. ಸೋಮವಾರ ಜಂತರ್ ಮಂತರ್‌ನಿಂದ ಸಂಸತ್‌ವರೆಗೆ ಪಾದಯಾತ್ರೆ ಮಾಡುತ್ತೇವೆಂದಿದ್ದೆವು. ಅಂದು ಸಂಸತ್ತಿನಲ್ಲಿ ಪ್ರತಿ ಗಂಟೆಗೊಮ್ಮೆ ಸದನವನ್ನು ಮುಂದೂಡಿದರು ಎಂದು ದೂರಿದರು.


ಸಂಸದರು ಹೊರಗೆ ಹೋಗಬಾರದೆಂಬುದು ಸರ್ಕಾರದವರ ಉದ್ದೇಶವಾಗಿತ್ತು. ಪ್ರತಿಭಟನೆ ವೇಳೆ ಪೊಲೀಸರು ಯಾವ ರೀತಿ ನಡೆದುಕೊಂಡರೆಂಬುದೂ ಎಲ್ಲರಿಗೂ ಗೊತ್ತು. ಎನ್‌ಟಿಎ ಸರಿಯಾಗಿ ಪರೀಕ್ಷೆ ನಡೆಸುತ್ತಿಲ್ಲವೆಂದಾಗ ಅದರ ಹೊಣೆ ಯಾರು ಹೊರಬೇಕು? ರಾಜ್ಯಮಟ್ಟದಲ್ಲೂ ಪ್ರತಿಭಟನೆಗಳು ನಡೆದವು. ಹಾಗಾಗಿ, ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದರು. ನಾಳೆ ಸದನದಲ್ಲಿ ಹೊಸ ಮಸೂದೆಯನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕೆಂಬ ಬೇಡಿಕೆ ಇದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ನೀಟ್ ಪರೀಕ್ಷೆಯನ್ನು ರದ್ದುಪಡಿಸಲು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಮಾದರಿಯಲ್ಲಿ ನೀಟ್ ಪರೀಕ್ಷೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಚರ್ಚೆಗೆ ತಗೊಂಡು ಬಂದಾಗ‌ ನಾವು ನಮ್ಮ ಸಲಹೆ ಕೊಡುತ್ತೇವೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದರು.

- - -

(ಕೋಟ್‌) ದಾವಣಗೆರೆ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಿರುವ ವಿಚಾರ ತಮ್ಮ ಗಮನಕ್ಕೆ ಬರುತ್ತಿದೆ. ಶೈಕ್ಷಣಿಕ ಸಾಲ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಯಾಕೆ ತಿರಸ್ಕರಿಸಲಾಗುತ್ತಿದೆ ಎಂಬ ಬಗ್ಗೆ ಪ್ರತಿ 15 ದಿನಕ್ಕೊಮ್ಮೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ರೈತರಿಗೆ ಸಾಲದ ಹಣ ಕಟ್ಟುವಂತೆ ನೋಟೀಸ್‌ ನೀಡುತ್ತಿರುವ ವಿಚಾರವೂ ಗಮನಕ್ಕೆ ಬಂದಿದೆ. ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಸಾಲ ಕಟ್ಟುವಂತೆ ನೋಟಿಸ್ ಕೊಡದಂತೆ ಸಂಬಂಧಿಸಿದ ಸಚಿವರು, ಶಾಸಕರ ಜೊತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಳಿ ಚರ್ಚಿಸುತ್ತೇವೆ.

- ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ.

- - -